ಪೊನ್ನಂಪೇಟೆ, ಸೆ. ೨೩ : ಪೊನ್ನಂಪೇಟೆ ತಾಲೂಕು ರಚನೆಯಾದ ಬಳಿಕ ತಾಲೂಕು ಕಚೇರಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಆಹಾರ ನಿಗಮದ ಬೃಹತ್ ಕಲ್ಲಿನ ಕಟ್ಟಡ ಕೆಡವಿ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.

ನೂತನವಾಗಿ ನಿರ್ಮಾಣ ಆಗಲಿರುವ ಪ್ರಜಾಸೌಧ ಕಟ್ಟಡ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಹಳೆ ತಾಲೂಕು ಕಚೇರಿ ಕೆಡವಿ ಹೊಸ ಪ್ರಜಾಸೌಧ ನಿರ್ಮಾಣಕ್ಕೆ ಟೆಂಡರ್ ಆಗಿರುವುದನ್ನು ಗಮನಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಕಟ್ಟಡವನ್ನು ಕೆಡವಿ ಕಬ್ಬಿಣ, ಮೇಲ್ಛಾವಣಿಯ ಶೀಟ್ ಹಾಗೂ ಕಲ್ಲುಗಳನ್ನು ಗುತ್ತಿಗೆದಾರ ಹೊರ ಸಾಗಿಸುತ್ತಿರುವುದರ ಬಗ್ಗೆ ಶಾಸಕ ಎ. ಎಸ್. ಪೊನ್ನಣ್ಣ ಅವರ ಗಮನಕ್ಕೆ ತಂದರು. ಈ ಸಂದರ್ಭ ಶಾಸಕ ಎ. ಎಸ್ ಪೊನ್ನಣ್ಣ ಅವರು ಹಳೇ ಸಾಮಗ್ರಿಗಳನ್ನು ಹೊಸ ಕಟ್ಟಡದ ನಿರ್ಮಾಣದ ಸಂದರ್ಭ ಬಳಸಿಕೊಳ್ಳುವಂತೆ ತಹಶೀಲ್ದಾರ್ ಹಾಗೂ ಕಾಮಗಾರಿ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು. ಈ ಸಂದರ್ಭ ನಾಗರಿಕ ವೇದಿಕೆಯ ಅಧ್ಯಕ್ಷ ಚೋಟ್ಟೆಯಂಡಮಾಡ ಬೋಸು ವಿಶ್ವನಾಥ ಅವರು ಮಾತನಾಡಿ, ಹಳೆ ಕಲ್ಲಿನ ಕಟ್ಟಡದ ಕಲ್ಲುಗಳನ್ನು ಹೊಸ ಕಟ್ಟಡದ ತಡೆಗೋಡೆ ನಿರ್ಮಾಣಕ್ಕೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕೆಂದು ಶಾಸಕರಿಗೆ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಆದರೆ ಈ ಕಟ್ಟಡವನ್ನು ಕೆಡವಿ ಕಬ್ಬಿಣ, ಶೀಟ್ ಹಾಗೂ ಕಲ್ಲುಗಳನ್ನು ಹೊರಸಾಗಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ನಾಗರಿಕ ವೇದಿಕೆ ಗಮನಕ್ಕೆ ತಂದಿದ್ದು, ಈ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಹಳೆ ಕಟ್ಟಡದ ಸಾಮಗ್ರಿಗಳನ್ನು ಹೊಸ ಕಟ್ಟಡದ ನಿರ್ಮಾಣದ ಸಮಯದಲ್ಲಿ ಬಳಸಿಕೊಳ್ಳಲು ತಹಶೀಲ್ದಾರ್ ಹಾಗೂ ಕಾಮಗಾರಿ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ್ದಾರೆ. ಆದಷ್ಟು ಶೀಘ್ರ ಹೊಸ ಕಟ್ಟಡ ನಿರ್ಮಾಣಗೊಂಡು ಕಛೇರಿ ಕೆಲಸಗಳಿಗೆ ಅನುವು ಮಾಡಿಕೊಡುವಂತಾಗಲಿ ಎಂದರು.

ಪೊನ್ನAಪೇಟೆ ತಾಲೂಕು ಹೋರಾಟ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ಅವರು ಮಾತನಾಡಿ, ವಿವಿಧ ಸಂಘ ಸಂಸ್ಥೆಗಳು ಹಾಗೂ ಹಿರಿಯ ನಾಗರಿಕರ ಹೋರಾಟದ ಫಲವಾಗಿ ಪೊನ್ನಂಪೇಟೆ ತಾಲೂಕು ರಚನೆಯಾಯಿತು. ಪೊನ್ನಂಪೇಟೆ ತಾಲೂಕಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಹಳೆಯ ಕಟ್ಟಡ ಕೆಡವುವ ಟೆಂಡರ್ ವಿಚಾರದಲ್ಲಿ ಪಾರದರ್ಶಕತೆ ಕಂಡು ಬರುತ್ತಿಲ್ಲ. ಈ ವಿಚಾರದಲ್ಲಿ ಇಂಜಿನಿಯರ್ ಕರೆಸಿ ವಿಚಾರಿಸಿದಾಗ ಸುಮಾರು ಒಂದು ಲಕ್ಷ ಕಲ್ಲುಗಳು ಇದ್ದು, ಸುಮಾರು ಒಂದು ಕೋಟಿ ಮೌಲ್ಯದ ಕಲ್ಲು ಹಾಗೂ ಇತರೆ ಸಾಮಗ್ರಿಗಳಿವೆ. ತಪ್ಪು ಮಾಹಿತಿ ನೀಡಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡಬಾರದು. ಈ ಕುರಿತು ಶಾಸಕರಲ್ಲಿ ಮನವಿ ಮಾಡಿದ್ದು ಮುಂದಿನ ದಿನಗಳಲ್ಲಿ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಎಂದರು.

ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ , ಪೊನ್ನಂಪೇಟೆ ತಹಶೀಲ್ದಾರ್ ಮೋಹನ್ ಕುಮಾರ್, ಪೊನ್ನಂಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಅಣ್ಣೀರ ಹರೀಶ್, ಉಪಾಧ್ಯಕ್ಷ ಆಲೀರ ರಶೀದ್, ನಾಗರಿಕ ವೇದಿಕೆಯ ಮಾಜಿ ಅಧ್ಯಕ್ಷ ಚಿಮ್ಮಣಮಾಡ ವಾಸು ಉತ್ತಪ್ಪ , ಕಾರ್ಯದರ್ಶಿ ಮೂಕಳೇರ ಸುರೇಶ್ ಪೂಣಚ್ಚ, ಕಾನೂನು ಸಲಹೆಗಾರ ಮತ್ರಂಡ ಅಪ್ಪಚ್ಚು ,ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಅರಮಣಮಾಡ ಸತೀಶ್, ಆಹ್ವಾನಿತ ಸದಸ್ಯ ಕಳ್ಳೇಂಗಡ ಗಣಪತಿ , ಹಿರಿಯ ನಾಗರಿಕ ಚೆಪ್ಪುಡಿರ ಪೊನ್ನಪ್ಪ, ನಾಗರಿಕರಾದ ಮತ್ರಂಡ ಬೋಪಣ್ಣ, ಮತ್ರಂಡ ದಿಲ್ಲು ಸೇರಿದಂತೆ ಮತ್ತಿತರರು ಇದ್ದರು.