ನಾಪೋಕ್ಲು, ಸೆ. ೨೩: ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದ ಸುಂದರ ಪರಿಸರದಲ್ಲಿ ಪೇಟೆ ಪಟ್ಟಣಗಳಿಂದ ಕಸ ತ್ಯಾಜ್ಯಗಳನ್ನು ತಂದು ಎಸೆಯುತ್ತಿದ್ದು ಸ್ಥಳೀಯರು ಸಮಸ್ಯೆ ಎದುರಿಸುವಂತೆ ಆಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ರಾತ್ರಿ ಹಗಲು ಎನ್ನದೇ ವಾಹನಗಳಲ್ಲಿ ಬರುವ ಕೆಲವು ಮಂದಿ ಈ ರೀತಿ ಪರಿಸರ ಹಾಳು ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ. ಗ್ರಾಮೀಣ ಪ್ರದೇಶದ ರಸ್ತೆ ಬದಿಯ ಮನೆಗಳ ಸಮೀಪ, ಕೃಷಿ ತೋಟಗಳಲ್ಲಿ ತ್ಯಾಜ್ಯಗಳನ್ನು ಎಸೆಯುತ್ತಿರುವುದು ಸ್ಥಳೀಯರಿಗೆ ಸಮಸ್ಯೆ ತಂದೊಡ್ಡಿದೆ. ಈಚೆಗೆ ಚೀಲದಲ್ಲಿ ಕೊಳೆತ ಮಾಂಸವನ್ನು ತಂದು ಸಮೀಪದ ತೋಟದಲ್ಲಿ, ಮನೆಯ ಬಳಿ ಎಸೆದು ಹೋಗಿರುವುದಾಗಿ ಸ್ಥಳೀಯ ನಿವಾಸಿ ಕೊಂಡಿರ ಶರಿನ್ ಆರೋಪಿಸಿದ್ದಾರೆ.