ಸುಂಟಿಕೊಪ್ಪ, ಸೆ. ೨೩: ಸುಂಟಿಕೊಪ್ಪ ಪೌರಕಾರ್ಮಿಕರ ೩ ಪ್ರಮುಖ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ನೇತೃತ್ವದಲ್ಲಿ ಪೌರಕಾರ್ಮಿಕರೆಲ್ಲರೂ ಒಂದು ದಿನದ ಸಾಂಕೇತಿಕ ಮುಷ್ಕರವನ್ನು ಮಾಡಿದರು.

ಈ ಸಂದರ್ಭ ಮಾತನಾಡಿದ ಪಿ.ಆರ್. ಭರತ್ ಅವರು, ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವ ಅಧಿಕಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಇದೆ. ಆದರೆ ಅವರು ಸಬೂಬುಗಳನ್ನು ಹೇಳುತ್ತಾ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಪೌರ ಕಾರ್ಮಿಕರು ತಮ್ಮ ಅನುಮೋದನೆಗಾಗಿ ಹಾಗೂ ಕನಿಷ್ಟ ವೇತನಕ್ಕಾಗಿ ಆಗ್ರಹಿಸಿ ಮುಷ್ಕರ ನಡೆಸಿದ್ದಾರೆ. ಒಂದು ವೇಳೆ ಅನುಮೋದನೆ ದೊರೆಯದಿದ್ದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಲಿದ್ದೇವೆ ಎಂದು ಭರತ್ ಎಚ್ಚರಿಕೆ ನೀಡಿದರು.

ಕೊಡಗು ಜಿಲ್ಲೆಯಲ್ಲಿ ೧೫೦ಕ್ಕೂ ಹೆಚ್ಚು ಮಂದಿಯ ಅನುಮೋದನೆಗಳು ಬಾಕಿ ಉಳಿದುಕೊಂಡಿದೆ. ಸುಂಟಿಕೊಪ್ಪದಲ್ಲಿ ೩ ಮಂದಿಯ ನೇಮಕಾತಿಯಾಗಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಪೌರಕಾರ್ಮಿಕರು ಮತ್ತು ನೀರು ಗಂಟಿಗಳು ಉದ್ಯೋಗ ಅನುಮೋದನೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ ಅವರು, ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಿನ ಆದಾಯವಿದ್ದು, ಸ್ವಚ್ಛತಾಗಾರ ಮತ್ತು ನೀರು ಗಂಟಿ, ಕಚೇರಿ ಸಿಬ್ಬಂದಿಗಳ ಕನಿಷ್ಟ ವೇತನ ಹೆಚ್ಚಳಗೊಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಅವರು, ಪೌರ ಕಾರ್ಮಿಕರ ಬೇಡಿಕೆಗಳ ಬಗ್ಗೆ ಆಡಳಿತ ಮಂಡಳಿಯ ಸಂಪೂರ್ಣ ಸಹಮತವಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಲೋಪದೋಷಗಳು ಉಂಟಾಗಿದ್ದು, ಅದನ್ನು ಸರಿಪಡಿಸುವ ವ್ಯವಸ್ಥೆ ಮಾಡಿದ್ದೇವೆ. ಮನವಿಯನ್ನು ಸಂಬAಧಿಸಿದವರಿಗೆ ಕಳುಹಿಸಿ ಶೀಘ್ರ ಕ್ರಮವಹಿಸುವಂತೆ ಒತ್ತಾಯಿಸಲಾಗುವುದೆಂದು ಹೇಳಿದರು. ಮುಷ್ಕರ ವೇಳೆ ರಂಗಸ್ವಾಮಿ, ವೀರಭದ್ರ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ, ಸಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.