ಶನಿವಾರಸಂತೆ, ಸೆ. ೨೪: ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಕ್ಷೇತ್ರದಲ್ಲಿ ಸೋಮವಾರ ಶರನ್ನವರಾತ್ರಿ ಆಚರಣೆ ಪ್ರಯುಕ್ತ ದೇವಿಯ ಪ್ರಥಮ ದಿನದ ಶ್ರೀಶೈಲಪುತ್ರಿ ಸ್ವರೂಪದ ಆರಾಧನಾ ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.

ಅರ್ಚಕರಾದ ಪ್ರಕಾಶ್ಚಂದ್ರ ಸುವರ್ಣ ಹಾಗೂ ಸಂತೋಷ್ ಕರ್ಕೇರ ದೇವಿ-ದೈವಕ್ಕೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಿ, ಎಳನೀರು, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿದರು. ಮಹಾ ಮಂಗಳಾರತಿಯಾಗಿ ತೀರ್ಥ-ಪ್ರಸಾದ ವಿನಿಯೋಗವಾಗಿ ಪೂಜಾ ಕಾರ್ಯ ಸಂಪನ್ನವಾಯಿತು. ನವರಾತ್ರಿ ಪೂಜಾ ದಿನಗಳಲ್ಲಿ ಹೂವಿನ ಸೇವಾರ್ಥದಾರ ಉದ್ಯಮಿ ಜಿ.ಈ. ಪ್ರವೀಣ್ ಹಾಗೂ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.