ನಾಪೋಕ್ಲು, ಸೆ. ೨೪: ರಸ್ತೆಗಳ ದುರಾವಸ್ಥೆ ಖಂಡಿಸಿ ನಾಪೋಕ್ಲು ಮತ್ತು ಬಲ್ಲಮಾವಟಿ ಬಿಜೆಪಿ ಶಕ್ತಿ ಕೇಂದ್ರಗಳ ವತಿಯಿಂದ ನಾಪೋಕ್ಲು ಜಿಎಂಪಿ ಶಾಲಾ ಸಮೀಪದಲ್ಲಿ ತೀವ್ರ ಹದಗೆಟ್ಟ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ನಡೆಸಲಾಯಿತು.

ರಸ್ತೆ ಗುಂಡಿಗಳಲ್ಲಿ ಗಿಡಗಳನ್ನು ನೆಟ್ಟು ಬಿಜೆಪಿ ಪ್ರಮುಖರು ಪದಾಧಿಕಾರಿಗಳು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಪ್ರಜೆಗಳ ತೆರಿಗೆ ಹಣ ಸರಿಯಾಗಿ ವಿನಿಯೋಗವಾಗುತ್ತಿಲ್ಲ. ಭ್ರಷ್ಟಾಚಾರ, ಹಗರಣಗಳಲ್ಲಿ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಕೊಡಗಿನ ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ. ಕಳೆದ ಒಂದು ಒಂದೂವರೆ ವರ್ಷಗಳಿಂದ ೧೫೦೦ ಕೋಟಿ ಹಣವನ್ನು ಜಿಲ್ಲೆಗೆ ವಿನಿಯೋಗ ಮಾಡಲಾಗಿದೆ ಎಂದು ಶಾಸಕರು ಹೇಳುತ್ತಿದ್ದಾರೆ. ಈ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಬಿಜೆಪಿ ಮಡಿಕೇರಿ ಗ್ರಾಮಾಂತರ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಕೊಡಗಿನ ಐದು ತಾಲೂಕುಗಳಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಲ್ಲಮಾವಟಿ ಶಕ್ತಿ ಕೇಂದ್ರದ ಅಧ್ಯಕ್ಷ ಕರವಂಡ ಲವ ನಾಣಯ್ಯ ಮಾತನಾಡಿ, ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸದೆ, ಅಧಿಕಾರಿಗಳು ಕಾಂಗ್ರೆಸ್ಸಿನ ಕೈಗೊಂಬೆಯಾಗಿದ್ದಾರೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದರು. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕೊಡಗು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭ ಲೋಕೋಪಯೋಗಿ ಇಲಾಖೆಯ ಅಭಿಯಂತರ (ಎಡಬ್ಲೂö್ಯಇ) ಗಿರೀಶ್ ಅವರನ್ನು ತರಟಾಗೆ ತೆಗೆದುಕೊಂಡು ಪ್ರತಿಭಟನಾಕಾರರು ಕೂಡಲೇ ಹದಗೆಟ್ಟ ರಸ್ತೆಗಳನ್ನು ಅಭಿವೃದ್ದಿಪಡಿಸುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಭಿಯಂತರ ಗಿರೀಶ್ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ವಿವರವನ್ನು ನೀಡಿ ಮಳೆ ಕಡಿಮೆಯಾದ ಕೂಡಲೆ ಕೆಲಸ ಪ್ರಾರಂಭಿಸಲಾಗುವುದೆAದು ತಿಳಿಸಿದರು. ಕಂದಾಯ ಪರಿವೀಕ್ಷಕ ರವಿಕುಮಾರ್ ಮುಖಾಂತರ ಬಿಜೆಪಿ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಾಂಗಿರ ಸತೀಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಗ್ರಾಮಾಂತರ ಅಧ್ಯಕ್ಷ ಚೇತನ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪೊಕ್ಕುಳಂಡ್ರ ದÀನೋಜ್, ರೈತ ಮೋರ್ಚಾದ ಜಿಲ್ಲಾ ಅಧ್ಯಕ್ಷ ಶಿವಚಾಳಿಯಂಡ ಜಗದೀಶ, ಉಪಾಧ್ಯಕ್ಷ ಪಾಡಿಯಮ್ಮಂಡ ಮನು ಮಹೇಶ್, ಒಬಿಸಿ ಮೋರ್ಚಾದ ತಾಲೂಕು ಮಂಡಲದ ಅಧ್ಯಕ್ಷ ಬಿ.ಎಂ. ಪ್ರತೀಪ, ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸದಸ್ಯರಾದ ಕರವಂಡ ಅಪ್ಪಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.