ಮಡಿಕೇರಿ, ಸೆ. ೨೫: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷಾ ಕಾರ್ಯ ಕೆಲವಾರು ಸಮಸ್ಯೆಗಳ ನಡುವೆ ಮಂದಗತಿಯಲ್ಲಿ ಸಾಗುವಂತಾಗಿದೆ. ಜಿಲ್ಲೆ ೧.೨೩ ಲಕ್ಷ ಮನೆಗಳ ಸಮೀಕ್ಷೆಯ ಗುರಿ ಇದ್ದು, ಸೆ. ೨೨ ರಿಂದ ಈತನಕ ೨,೫೦೦ ಮನೆಗಳ ಸಮೀಕ್ಷೆ ಮಾತ್ರ ನಡೆದಿದೆ.
ಜಿಲ್ಲೆಯಾದ್ಯಂತ ಮಳೆಯೂ ಸುರಿಯುತ್ತಿರುವುದು ಒಂದೆಡೆಯಾದರೆ, ನೆಟ್‌ವರ್ಕ್ನ ತೊಂದರೆ, ಸರ್ವರ್‌ಡೌನ್‌ನ ಸಮಸ್ಯೆಯಿಂದಾಗಿ ಸಮೀಕ್ಷೆಗೆ ನಿಯೋಜಿತರಾಗಿರುವ ಸಿಬ್ಬಂದಿಗಳು ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಮನೆಗಳೂ ದೂರ ದೂರದಲ್ಲಿವೆ. ಒಂದೊAದು ಮನೆಗೆ ತೆರಳಿ ಸಮೀಕ್ಷೆಗೆ ಮುಂದಾದರೂ ತಾಸುಗಟ್ಟಲೆ ಕಾಲ ಸರ್ವರ್ ಡೌನ್‌ನಿಂದ, ನೆಟ್‌ವರ್ಕ್ನ ಸಮಸ್ಯೆ, ಒಟಿಪಿ ಸಿಗದಿರುವುದು ಮತ್ತಿತರ ಕಾರಣಗಳಿಂದ ಸಮೀಕ್ಷದಾರರು ಪರದಾಡುತ್ತಿದ್ದಾರೆ.
ಜನತೆ ಸಹಕಾರ ನೀಡುತ್ತಿದ್ದರೂ, ತೀರಾ ವಿಳಂಬವಾಗುತ್ತಿರುವ ಬಗ್ಗೆ ಅಲ್ಲಲ್ಲಿ ಅಸಮಾಧಾನಗಳು ಕೇಳಿಬರುತ್ತಿವೆ. ಸಮೀಕ್ಷೆಗೆ ನಿಯೋಜಿತರಾಗಿರುವವರಿಗೆ ಸುಮಾರು ೮೦ ರಿಂದ ೧೫೦ ರಷ್ಟು ಮನೆಗಳ ಗುರಿ ನೀಡಲಾಗಿದೆ. ಈತನಕ ಕೆಲವು ಸಿಬ್ಬಂದಿಗಳಿಗೆ ಕೆಲವೇ ಕೆಲವು ಮನೆಗಳ ಕಾರ್ಯ ಮಾತ್ರ ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದು ತಿಳಿದು ಬಂದಿದೆ.
ಜತೆಗೆ, ಜಿಗಣೆ ಕಾಟ, ನಾಯಿಗಳ ಕಾಟದಿಂದಲೂ, ಹೆದರಿಕೆ, ಹಿಂಜರಿಕೆಯ ನಡುವೆ ಈ ಕೆಲಸ ಸಾಗುತ್ತಿರುವುದಾಗಿ ಸಾರ್ವಜನಿಕÀರೇ ಸಿಬ್ಬಂದಿಗಳ ಪೀಕಲಾಟವನ್ನು ತಿಳಿಸುತ್ತಿದ್ದಾರೆ.
ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಣತಿಗೆ ತೆರಳಿದ ಶಿಕ್ಷಕರೋರ್ವರಿಗೆ ಜಿಗಣೆ ಕಚ್ಚಿದ ಹಿನ್ನೆಲೆಯಲ್ಲಿ ಅನಾರೋಗ್ಯ ಸಮಸ್ಯೆ ಉಂಟಾಗಿದ್ದು, ಗಣತಿ ಕಾರ್ಯದಿಂದ ಬಿಡುಗಡೆ ಮಾಡಿ ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇದರೊಂದಿಗೆ ಶೈಕ್ಷ ಣಿಕ ಹಾಗೂ ಸಾಮಾಜಿಕ ಗಣತಿ ಸಮೀಕ್ಷೆ ಸಂದರ್ಭ ಅವೈಜ್ಞಾನಿಕ ನಿಯಮಾವಳಿಗಳಿಂದ ಶಿಕ್ಷಕರು ಪರದಾಡುತ್ತಿ ರುವುದು ಕಂಡು ಬಂದಿದ್ದು, ಸಮಸ್ಯೆಯ ಕುರಿತು ತಾಲೂಕು ತÀಹಶೀಲ್ದಾರ್ ಗಮನಕ್ಕೆ ತಂದಿದ್ದಾರೆ.
ಗಣತಿದಾರ ಶಿಕ್ಷಕರು ಮನೆಗಳಿಗೆ ಭೇಟಿ ನೀಡುವ ಸಂದರ್ಭ ತಾಂತ್ರಿಕ ದೋಷ ಕಂಡು ಬರುತ್ತಿದ್ದು, ಮೊಬೈಲ್ ಆ್ಯಪ್ ಕಾರ್ಯನಿರ್ವಹಿಸುತ್ತಿಲ್ಲ. ಓಟಿಪಿ ಮತ್ತು ಓಡಿಪಿ ಬರುತ್ತಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ. ಗಣತಿ ಸಂದರ್ಭ ಒಂದೇ ಬಡಾವಣೆಯಲ್ಲಿರುವ ಕೆಲವು ಮನೆಗಳಿಗೆ ಯುಎಚ್‌ಐಡಿ ಸಂಖ್ಯೆ ಇರುವುದಿಲ್ಲ. ವಿಭಿನ್ನ ರೀತಿಯಲ್ಲಿ ಹಂಚಿಕೆ ಆಗಿದೆ. ತಾಲೂಕಿನ ಬಹುತೇಕ ಮನೆಗಳಲ್ಲಿ ಯುಎಚ್‌ಐಡಿ ಸಂಖ್ಯೆಯ ಚೀಟಿ ಮಳೆ ನೀರಿನಿಂದ ತೊಯ್ದು ಸಂಖ್ಯೆಗಳು ಅಳಿಸಿಹೋಗಿರುವುದರಿಂದ ಸಮಸ್ಯೆಯಾಗಿದೆ.
ಇದರೊಂದಿಗೆ ಶ್ವಾನಗಳ ಹಾವಳಿಯಿಂದ ಶಿಕ್ಷಕರು ಬೆದರಿ ಸ್ಥಳದಿಂದ ಪಲಾಯನ ಮಾಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಇನ್ನು ಕೆಲ ಶಿಕ್ಷಕಿಯರು ಸಹಾಯಕ್ಕೆಂದು ತಮ್ಮ ಪತಿ ಅಥವಾ ಕುಟುಂಬಸ್ಥರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ದೂರದಲ್ಲಿ ಮನೆಗಳಿದ್ದು, ಕಾಡುಮೇಡು ಹತ್ತಿ ಸಮೀಕ್ಷೆ ನಡೆಸಬೇಕಾಗಿದೆ. ಕುಗ್ರಾಮಗಳ ಮನೆಗಳಿಗೆ ತೆರಳುವುದೂ ಸಾಹಸಮಯವಾಗಿದೆ. ಒಟ್ಟಾರೆ ಕಡಿಮೆ ಅವಧಿಯಲ್ಲಿ ತಮಗೆ ನೀಡಿರುವಷ್ಟು ಮನೆಗಳ ಗಣತಿ ಕಾರ್ಯ ಮುಗಿಸುವ ಒತ್ತಡ ಗಣತಿದಾರರಲ್ಲಿದೆ.
ಇದೆಲ್ಲದರ ನಡುವೆ ಶಿಕ್ಷಕರ ಸಂಘಟನೆಗಳ ಕೆಲ ಪ್ರಮುಖರು ತಮ್ಮ ಪ್ರಭಾವ ಬೀರಿ ಗಣತಿ ಕಾರ್ಯದಿಂದ ಹಿಂದೆ ಸರಿದಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಪ್ರಭಾವ ಬಳಸಿ ಸಮೀಕ್ಷೆಗೆ ಹೆಸರು ನೋಂದಾವಣೆಯಾಗದAತೆ ಮಾಡಿಕೊಂಡಿದ್ದಾರೆ ಎಂಬ ೪ಏಳನೇ ¥ (ಮೊದಲ ಪುಟದಿಂದ) ಆರೋಪಗಳೂ ಸಹ ಸಮೀಕ್ಷೆ ಸಂದರ್ಭ ಕೇಳಿಬರುತ್ತಿವೆ.
ಈ ಬಗ್ಗೆ “ಶಕ್ತಿ''ಯೊಂದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ದೀಪಕ್ ಅವರು ಸರ್ವರ್‌ನ ತೊಂದರೆ ರಾಜ್ಯಾದ್ಯಂತ ಇರುವ ಸಮಸ್ಯೆಯಾಗಿದ್ದು, ಪರಿಹರಿಸುವ ಪ್ರಯತ್ನ ನಡೆದಿದೆ. ಕೊಡಗಿನಲ್ಲಿ ನೆಟ್‌ವರ್ಕ್ ಸಮಸ್ಯೆ ಎಲ್ಲರಿಗೂ ಅರಿವಿದೆ. ಆದರು ಇನ್ನೂ ಹಲವು ದಿನಗಳು ಬಾಕಿಯಿದ್ದು, ಈ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದರು.