ಚೆಯ್ಯಂಡಾಣೆ, ಸೆ. ೨೫: ದವಸ ಭಂಡಾರದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ನೂತನ ಸುಸಜ್ಜಿತ ಕಟ್ಟಡ ನಿರ್ಮಿಸಲು ಆಡಳಿತ ಮಂಡಳಿ ಉದ್ದೇಶಿಸಿದೆ. ಇದಕ್ಕೆ ಸರ್ವ ಸದಸ್ಯರ ಸಹಕಾರ ಅಗತ್ಯವೆಂದು ಬೇತು ಗ್ರಾಮದ ದವಸ ಭಂಡಾರದ ಅಧ್ಯಕ್ಷ ಕೊಂಡೀರ ಗಣೇಶ್ ನಾಣಯ್ಯ ಹೇಳಿದರು.
ಬೇತು ಗ್ರಾಮದ ದವಸ ಭಂಡಾರದ ಕಟ್ಟಡದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಂಘವು ೨೨೧ ಸದಸ್ಯರನ್ನು ಹೊಂದಿದೆ. ಹಳೇ ಕಾಲದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಈಗಿನ ಅವಶ್ಯಕತೆಗೆ ತಕ್ಕಂತೆ ನೂತನ ಕಟ್ಟಡದ ನಿರ್ಮಾಣದ ಅಗತ್ಯ ಇದೆ. ಇದಕ್ಕಾಗಿ ಅಂದಾಜು ರೂ. ೪೦ ಲಕ್ಷಗಳ ಅಗತ್ಯವಿದೆ ಎಂದರು.
ಸಭೆಯಲ್ಲಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸದಸ್ಯರಿಗೆ ಅವಶ್ಯಕತೆ ಇದ್ದಾಗ ಸಂಘದ ವತಿಯಿಂದ ಸಾಲ ನೀಡಿ ಸಹಕರಿಸಬೇಕು ಎಂದು ಸದಸ್ಯರು ಮನವಿ ಮಾಡಿದರು. ನಿರ್ದೇಶಕ ಬೊಳ್ಳೆಪಂಡ ಜಾನ್ ಪೂಣಚ್ಚ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಬೊಳ್ಳೆಪಂಡ ಪೆಮ್ಮಯ್ಯ ವಾರ್ಷಿಕ ಲೆಕ್ಕವನ್ನು ಮಂಡಿಸಿದರು. ಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮರಣ ಹೊಂದಿದ ದವಸ ಭಂಡಾರದ ಸದಸ್ಯರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಲಾಯಿತು.
ಈ ಸಂದರ್ಭ ದವಸ ಭಂಡಾರದ ಉಪಾಧ್ಯಕ್ಷ ಕಲ್ಯಾಟಂಡ ರಮೇಶ್ ಚಂಗಪ್ಪ, ನಿರ್ದೇಶಕರಾದ ಕುಟ್ಟಂಜೆಟ್ಟೀರ ಶ್ಯಾಮ್ ಬೋಪಣ್ಣ, ಕೊಂಡೀರ ಸುರೇಶ್, ಚೋಕಿರ ಪ್ರಭು, ಕಾಳೆಯಂಡ ಸಾಬ ತಿಮ್ಮಯ್ಯ, ಪಾತಂಡ ಜಯ, ಅಪ್ಪೇರಿಯಂಡ ಗೌರಮ್ಮ, ಮುಕ್ಕಾಟಿರ ರೋಹಿಣಿ ಸೇರಿದಂತೆ ದವಸ ಭಂಡಾರದ ಸರ್ವ ಸದಸ್ಯರು ಹಾಜರಿದ್ದರು. ನಿಷಾ ಹಾಗೂ ಕಾವೇರಮ್ಮ ಪ್ರಾರ್ಥಿಸಿದರು. ಬೊಳ್ಳೆಪಂಡ ಹರೀಶ್ ಪೊನ್ನಯ್ಯ ನಿರೂಪಿಸಿದರು. ಕೊಂಡೀರ ಗಣೇಶ್ ಸ್ವಾಗತಿಸಿ, ಕಲ್ಯಾಟಂಡ ರಮೇಶ್ ಚಂಗಪ್ಪ ವಂದಿಸಿದರು.