ಸೋಮವಾರಪೇಟೆ, ಸೆ. ೨೫: ಪಟ್ಟಣದ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಕೊಂಡಿರುವ ಪೌರ ಕಾರ್ಮಿಕರ ಸೇವೆ ಅನನ್ಯವಾದುದು; ಅವರ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಪಟ್ಟಣದ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯಿಸಿದರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪೌರಕಾರ್ಮಿಕರನ್ನು ಭೇಟಿ ಮಾಡಿ, ಪೌರ ಕಾರ್ಮಿಕರೊಂದಿಗೆ ಉಭಯ ಕುಶಲೋಪರಿ ನಡೆಸಿದ ಸ್ವಾಮೀಜಿಗಳು, ಕಾರ್ಮಿಕರ ಸೇವೆಯನ್ನು ಸ್ಮರಿಸಿದರು.
ಯಾವುದೇ ವೃತ್ತಿಯ ಬಗ್ಗೆ ಪ್ರೀತಿ ಬೆಳೆಸಿಕೊಂಡರೆ ಕರ್ತವ್ಯದಲ್ಲಿ ಸಾರ್ಥಕತೆ ಕಾಣಬಹುದು ಎಂದ ಅವರು, ಪೌರ ಕಾರ್ಮಿಕರು ತಮ್ಮ ಆರೋಗ್ಯದತ್ತಲೂ ಹೆಚ್ಚಿನ ಗಮನ ಹರಿಸಬೇಕೆಂದು ಕಿವಿಮಾತು ನುಡಿದರು.ಪಟ್ಟಣ ಪಂಚಾಯಿತಿಯ ಮಾಜಿ ನಾಮನಿರ್ದೇಶಿತ ಸದಸ್ಯ ಎಸ್. ಮಹೇಶ್ ಅವರು ಪೌರ ಕಾರ್ಮಿಕರಿಗೆ ಪ್ರತಿವರ್ಷದಂತೆ ಸಿಹಿ ವಿತರಿಸಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಅಭಿಯಂತರ ಹೇಮಕುಮಾರ್, ಆರೋಗ್ಯ ನಿರೀಕ್ಷಕ ಜಾಸಿಂಖಾನ್, ಸಿಬ್ಬಂದಿ ಜೀವನ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.