ಬೆಂಗಳೂರು, ಸೆ. ೨೫: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಜಾತಿ ಗಣತಿಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಎರಡು ದಿನ ವಿವರವಾದ ವಾದಗಳನ್ನು ಆಲಿಸಿತು. ಅಂತಿಮವಾಗಿ ಇಂದು ಜಾತಿ ಗಣತಿಗೆ ತಡೆ ನೀಡಲು ನಿರಾಕರಿಸಿ ಮಧ್ಯಂತರ ಆದೇಶ ಹೊರಡಿಸಿದೆ.

ಆದರೆ ರಾಜ್ಯ ಸರ್ಕಾರದ ಜಾತಿಗಣತಿ ಸಮೀಕ್ಷೆ ನಡೆಸಲು ಕೆಲವು ಷರತ್ತುಗಳನ್ನು ಹೈಕೋರ್ಟ್ ವಿಧಿಸಿದ್ದು, ದತ್ತಾಂಶವನ್ನು ರಾಜ್ಯ ಸರ್ಕಾರ ಸೇರಿ ಯಾರಿಗೂ ಬಹಿರಂಗಪಡಿಸಬಾರದು. ದತ್ತಾಂಶದ ಗೌಪ್ಯತೆಯನ್ನು ಹಿಂದುಳಿದ ವರ್ಗಗಳ ಆಯೋಗ ರಕ್ಷಿಸಬೇಕು ಎಂದು ಸೂಚಿಸಿದೆ. ಜನರು ಸ್ವಯಂಪ್ರೇರಣೆಯಿAದ ಮಾಹಿತಿ ನೀಡಿದರಷ್ಟೇ ಪಡೆಯಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಮಾಹಿತಿ ನೀಡುವಂತೆ ಯಾವುದೇ ಒತ್ತಡ ಹಾಕಬಾರದು ಎಂದು ಹೈಕೋರ್ಟ್ ಮಹತ್ವದ ಷರತ್ತು ವಿಧಿಸಿ, ವಿಚಾರಣೆಯನ್ನು ಡಿಸೆಂಬರ್ ಎರಡನೇ ವಾರಕ್ಕೆ ಮುಂದೂಡಿದೆ.

ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ಅರ್ಜಿಗಳು ಯಾವುದೇ ಸಾಂವಿಧಾನಿಕ ನಿಬಂಧನೆಗಳನ್ನು ಅಥವಾ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ, ೧೯೯೫ ರ ನಿರ್ದಿಷ್ಟ ವಿಭಾಗಗಳನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ ವಾಸ್ತವವಾಗಿ ಸರ್ಕಾರ ಅಧಿಕಾರ ಚಲಾಯಿಸುವುದನ್ನು ತಡೆಯಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.