ಸೋಮವಾರಪೇಟೆ, ಸೆ. ೨೫: ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೪-೨೫ನೇ ಸಾಲಿನಲ್ಲಿ ೧.೧೮ ಕೋಟಿ ರೂ.ಗಳ ಲಾಭಗಳಿಸಿದ್ದು, ಗ್ರಾಮೀಣ ಭಾಗದ ಸಹಕಾರ ಸಂಘ ಅತೀ ಹೆಚ್ಚಿನ ಲಾಭಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಬಿ. ಭರತ್‌ಕುಮಾರ್ ಹೇಳಿದರು.
ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಘದ ಸದಸ್ಯರು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿದ ಹಿನ್ನೆಲೆಯಲ್ಲಿ ಸಂಘ ಅಭಿವೃದ್ಧಿಯ ಪಥದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಶೇ. ೨೫ರಷ್ಟು ಲಾಭಾಂಶವನ್ನು ಸದಸ್ಯರಿಗೆ ವಿತರಿಸಲಾಗುವುದು ಎಂದು ಹೇಳಿದರು.
ಸಂಘದಲ್ಲಿ ೨೬೮೩ ಸದಸ್ಯರಿದ್ದು, ೩,೦೪,೫೦,೦೯೦ ರೂ.ಗಳಷ್ಟು ಪಾಲು ಬಂಡವಾಳವಿದೆ. ೨೩,೯೦,೮೦,೫೦೭ ರೂ, ಗಳಷ್ಟು ಠೇವಣಿ ಇದೆ. ೨೦೨೪-೨೫ನೇ ಸಾಲಿನಲ್ಲಿ ೧೦೮೬ ಸದಸ್ಯರಿಗೆ ೨೪,೧೬,೫೨,೦೦೦ ರೂ.ಗಳಷ್ಟು ಕೆ.ಸಿ.ಸಿ. ಸಾಲ ನೀಡಿದ್ದು, ಶೇ.೧೦೦ ರಷ್ಟು ಮರುಪಾವತಿಯಾಗಿದೆ. ೧೫೬೬ ಸದಸ್ಯರು ಯಶಸ್ವಿನಿ ಆರೋಗ್ಯ ಯೋಜನೆಯಡಿ ನೋಂದಾವಣೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಸಂಘಕ್ಕೆ ಸೇರಿದ ೨ ಮಾರಾಟ ಕೇಂದ್ರಗಳಲ್ಲಿ ಸರ್ಕಾರದ ಪಡಿತರ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಸಂಘಕ್ಕೆ ೧.೦೬ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಒಳ ವಿನ್ಯಾಸ ಕೆಲಸ ನಡೆಯುತ್ತಿದೆ. ಸದಸ್ಯರ ಹಿತದೃಷ್ಟಿಯಿಂದ ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲ, ಗೊಬ್ಬರ, ಜಾಮೀನು, ಪಿಗ್ಮಿ ಠೇವಣಿ ಆಧಾರಿತ ಹಾಗು ವ್ಯಾಪಾರಾಭಿವೃದ್ಧಿ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು. ಸಂಘದ ಅಭಿವೃದ್ಧಿ ಬಗ್ಗೆ ಸದಸ್ಯರು ಚರ್ಚಿಸಿದರು. ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷೆ ಎಚ್.ಎಸ್. ನೇತ್ರಾವತಿ, ನಿರ್ದೇಶಕರುಗಳಾದ ಎಚ್.ಆರ್. ಸುರೇಶ್, ಬಿ.ಪಿ. ಮೊಗಪ್ಪ, ಕೆ.ಕೆ. ಶಿವಪ್ರಕಾಶ್, ಜಿ.ಎಂ. ಹೂವಯ್ಯ, ಎ.ಎಸ್. ನವೀನ್ ಕುಮಾರ್, ಜಿ.ಎಸ್. ನಾಗರಾಜು, ಕೆ.ಜಿ. ದಿನೇಶ್, ಎಸ್.ಸಿ. ಸುನೀತ, ಜಿ.ಈ. ಸುರೇಶ್, ಜಿ.ಬಿ. ಗಿರೀಶ್, ಕೆ.ಎಲ್. ರಕ್ಷಿತ್, ಸಿ.ಇ.ಓ. ಎಂ.ಎಚ್. ಕಿರಣ್ ಇದ್ದರು.