ಮಡಿಕೇರಿ, ಸೆ. ೨೬: ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಹಿಂದೆAದೂ ಕಾಣದ ದಾಖಲೆಯ ಪ್ರಮಾಣದ ಅಭಿವೃದ್ಧಿ ಕಾರ್ಯ ಈ ಆರ್ಥಿಕ ವರ್ಷದಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ಲೋಕೋಪಯೋಗಿ ಇಲಾಖೆ ವತಿಯಿಂದ ರೂ. ೧೮೬ ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಅಭಿವೃದ್ಧಿ ಕಾಣಲಿದ್ದು, ಮಡಿಕೇರಿ ಭಾಗಮಂಡಲ ರಸ್ತೆ, ಮಡಿಕೇರಿ ವೀರಾಜಪೇಟೆ ಗೋಣಿಕೊಪ್ಪ ರಸ್ತೆ, ಗೋಣಿಕೊಪ್ಪ ಕುಟ್ಟ ರಸ್ತೆ, ಕೊಣನೂರು ಮಾಕುಟ್ಟ ರಸ್ತೆ, ಹುಣಸೂರು ತಲಕಾವೇರಿ ರಸ್ತೆ, ಮಡಿಕೇರಿ ಸೋಮವಾರಪೇಟೆ ರಸ್ತೆ, ಮಡಿಕೇರಿ ಕಡಮಕಲ್ಲು ರಸ್ತೆ, ಹಾಕತ್ತೂರು ಅರೆಕಾಡು, ಅಭ್ಯತ್‌ಮಂಗಲ ರಸ್ತೆ, ಕತ್ತಲೆಕಾಡು, ಮರಗೋಡು, ಕೊಂಡAಗೇರಿ ರಸ್ತೆ, ಐಗೂರು - ಕಿರಗಂದೂರು ಕೊಡಗದ್ದೆ ರಸ್ತೆ, ಪೆರುಂಬಾಡಿ ಬಿಟ್ಟಂಗಾಲ ರಸ್ತೆ, ಕೆದಮುಳ್ಳೂರು ಕಡಂಗ ರಸ್ತೆ, ನಾಪೊಕ್ಲು ಬಲ್ಲಮಾವಟಿ ಭಾಗಮಂಡಲ ರಸ್ತೆ, ಅಮ್ಮತ್ತಿ ತಿತಿಮತಿ ರಸ್ತೆ, ಚೆಟ್ಟಿಮಾನಿ ದಬ್ಬಡ್ಕ ಕಲ್ಲುಗುಂಡಿ ರಸ್ತೆ, ಕಾಟಕೇರಿ ಗೂಳಿಕಟ್ಟೆ ಹರವನಾಡು ಅವಂದೂರು ರಸ್ತೆ, ಪೊನ್ನಂಪೇಟೆ ಕಾನೂರು ರಸ್ತೆ, ಮಸಗೋಡು ಯಲಕನೂರು ಕಣಿವೆ ರಸ್ತೆ, ಶ್ರೀಮಂಗಲ ನಾಲ್ಕೇರಿ ರಸ್ತೆ, ಆಲೂರು ಅಂಕನಹಳ್ಳಿ ರಸ್ತೆ, ಸೋಮವಾರಪೇಟೆ ಶಾಂತಳ್ಳಿ ರಸ್ತೆ ಸೇರಿದಂತೆ ಒಟ್ಟು ೬೮ ಮುಖ್ಯ ರಸ್ತೆಗಳು (ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು) ಅಭಿವೃದ್ಧಿ ಕಾಣಲಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಮಳೆನಿಂತ ಕೂಡಲೇ ಕಾಮಗಾರಿ ಚಾಲನೆಗೊಳ್ಳಲಿದೆ ಎಂದು ವಿವರಿಸಿದರು.

ಬಿಜೆಪಿ ಪ್ರತಿಭಟನೆ ನಡೆಸುವ ಮೊದಲು ತಮ್ಮ ಅವಧಿಯಲ್ಲಿ ಯಾವ ರೀತಿ ಕೆಲಸ ಮಾಡಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದರು. ಎ.ಎಸ್. ಪೊನ್ನಣ್ಣ ಮತ್ತು ಡಾ. ಮಂತರ್ ಗೌಡ ಅವರು ಸರ್ಕಾರದಿಂದ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದು ಅವರನ್ನು ಬಿಜೆಪಿಗರು ಅಭಿನಂದಿಸಲಿ ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧೧೬ ಕೋಟಿ ವೆಚ್ಚದಲ್ಲಿ ೧೫೨೨ ಕಾಮಗಾರಿಗಳು ಜಿಲ್ಲೆಯ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಸಲು ಕ್ರಿಯಾಯೋಜನೆ ಸಿದ್ದಗೊಂಡಿದ್ದು ತಾಂತ್ರಿಕ ಅನುಮೋದನೆ ದೊರಕಿದೆ ಎಂದು ವಿವರಿಸಿದರು.

ಕೆ.ಆರ್.ಐ.ಡಿ.ಎಲ್ ಸಂಸ್ಥೆ ಮುಖಾಂತರ ಜಿಲ್ಲೆಯಲ್ಲಿ ೮೩ ಕೋಟಿ ರೂ ವೆಚ್ಚದಲ್ಲಿ ಒಟ್ಟು ೪೦೮ ಆಯ್ದ ಕಾಮಗಾರಿ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಇದರ ಜೊತೆಗೆ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ರವರ ಶಾಸಕರ ನಿಧಿಯಲ್ಲಿ ತಲಾ ೫೦ ಕೋಟಿಯಂತೆ ಒಟ್ಟು ನೂರು ಕೋಟಿ ರೂ. ಗಳಲ್ಲಿ ಶೇಕಡಾ ೮೦ ರಷ್ಟನ್ನು ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಶಾಸಕದ್ವಯರು ಮೀಸಲಿಟ್ಟಿದ್ದು, ಅಂತಿಮ ಪಟ್ಟಿ ಅನುಮೋದನೆಯಾಗಬೇಕಿದೆ ಎಂದು ತಿಳಿಸಿದರು.

ಇದರ ಮಾಹಿತಿ ಬಿಜೆಪಿಯ ಮಾಜಿ ಶಾಸಕರಿಗೆ ಲಭ್ಯವಾಗಿದ್ದು ತಾವು ೨೦ ವರ್ಷದಲ್ಲಿ ಮಾಡದೇ ಇದ್ದ ಸಾಧನೆಯನ್ನು ಎರಡೇ ವರ್ಷದಲ್ಲಿ ನೂತನ ಶಾಸಕದ್ವಯರು ಮಾಡಿದ್ದನ್ನು ಕಂಡು ವಿಚಲಿತರಾಗಿ ಮಳೆಗಾಲದಲ್ಲಿಯೇ ಪ್ರತಿಭಟನೆಯ ನಾಟಕವಾಡಿದ್ದಾರೆ ಎಂದು ಲೇವಡಿ ಮಾಡಿದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿ, ಕಾವೇರಿ ಜಾತ್ರೆ ಸಂಬAಧ ರೂ. ೬೦ ಲಕ್ಷ ವೆಚ್ಚದಲ್ಲಿ ಮಡಿಕೇರಿ ಭಾಗಮಂಡಲ ರಸ್ತೆ ದುರಸ್ತಿ ಕಾರ್ಯ ನಡೆಯಲಿದ್ದು, ನಂತರ ರಸ್ತೆಯ ಪೂರ್ಣ ಪ್ರಮಾಣದ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣದ ಆಧ್ಯಕ್ಷ ಹೊಸೂರು ಸೂರಜ್ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಬಿಜೆಪಿ ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ ಎಂದು ಖಂಡಿಸಿದರು. ಡಿ.ಸಿ.ಸಿ. ಸದಸ್ಯರಾದ ಸಂಪಾಜೆ ಸುರೇಶ್ ಮತ್ತು ಖಲೀಲ್ ಬಾಷಾ ಉಪಸ್ಥಿತರಿದ್ದರು.