ಸೋಮವಾರಪೇಟೆ, ಸೆ. ೨೬: ಇಲ್ಲಿನ ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ಗೆ ಜಿಲ್ಲಾ ಗವರ್ನರ್ ಪಿ.ಕೆ. ರಾಮಕೃಷ್ಣ ಭೇಟಿ ನೀಡಿದರು.

ರೋಟರಿ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವೆಡೆ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳ ದೈನಂದಿನ ಚಲನ ವಲನಗಳಲ್ಲಿ ವ್ಯತ್ಯಾಸ ಕಂಡುಬAದಲ್ಲಿ ತಕ್ಷಣ ಅವರ ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದರು. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಬಿಗಡಾಯಿಸಲಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ರೋಟರಿ ಸಂಸ್ಥೆಯೂ ಕೆಲಸ ಮಾಡುತ್ತಿದೆ. ಶಾಲಾ ಕಾಲೇಜುಗಳಲ್ಲಿ ರೋರ‍್ಯಾಕ್ಟ್ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮಾದಕ ಪದಾರ್ಥಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ರೋಟರಿ ಸಂಸ್ಥೆ ಪ್ರಪಂಚದ ಸೇವಾ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. ಸಾಕಷ್ಟು ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದ್ದು, ನಮ್ಮ ಸದಸ್ಯರ ಸಂಖ್ಯೆ ಹೆಚ್ಚಳವಾಗಬೇಕಿದೆ. ಸ್ಥಳೀಯ ಸಂಸ್ಥೆಗಳು ಜನರಲ್ಲಿ ರೋಟರಿ ಬಗ್ಗೆ ಅರಿವು ಮೂಡಿಸುವ ಮೂಲಕ ಸದಸ್ಯತ್ವ ಹೆಚ್ಚಿಸಬೇಕಿದೆ. ಇದರೊಂದಿಗೆ ಸಮಾಜಮುಖಿ ಯೋಜನೆಗಳನ್ನು, ದಾನಿಗಳ ನೆರವಿನೊಂದಿಗೆ ಅನುಷ್ಠಾನ ಮಾಡುವ ಕೆಲಸ ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕಿ ಸಿ.ಕೆ. ರಾಧಾ, ಕುವೆಂಪು ವಿದ್ಯಾಸಂಸ್ಥೆಯ ಶಿಕ್ಷಕಿ ಚಂದ್ರಕಲಾ, ಹಾನಗಲ್ಲು ಗ್ರಾಮದ ಅಂಗನವಾಡಿ ಶಿಕ್ಷಕಿ ಶಾರದ, ಆರೋಗ್ಯ ಇಲಾಖೆಯ ಮೋಹಿನಿ ಹಾಗೂ ಪೌರಕಾರ್ಮಿಕರಾದ ಕಾಳಮ್ಮ ಅವರುಗಳನ್ನು ಸನ್ಮಾನಿಸಲಾಯಿತು. ರೋಟರಿ ಸಂಸ್ಥೆಯ ಅಧ್ಯಕ್ಷೆ ವೀಣಾ ಮನೋಹರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ, ವಲಯ ಸೇನಾನಿ ರಾಕೇಶ್ ಪಟೇಲ್, ಉಪಾಧ್ಯಕ್ಷೆ ರಾಜ್‌ಶ್ರೀ ಸದಾನಂದ್, ಪ್ರಧಾನ ಕಾರ್ಯದರ್ಶಿ ಡಿ.ಪಿ. ರಮೇಶ್ ಇದ್ದರು.