ಮಡಿಕೇರಿ, ಸೆ. ೨೬: ‘ಕಾಫಿ ಅನುಭವ’ ಎಂಬ ಹೊಸ ಟ್ರೆಂಡ್ ಶುರುವಾಗಿದೆ. ಹಲವಾರು ಕೆಫೆಗಳಲ್ಲಿ ಕಾಫಿಯನ್ನು ಗ್ರಾಹಕರಿಗೆ ನೀಡುವಾಗ ಆ ಕಾಫಿ ಹುಡಿ, ಬೀಜ ಎಲ್ಲಿಂದ ಬಂದಿದೆ, ಯಾವ ರೀತಿ ಬೆಳೆದಿದೆ, ಯಾವ ಕ್ರಮಗಳನ್ನು ಬಳಸಿ ಅದನ್ನು ಉತ್ಪಾದಿಸಲಾಗಿದೆ ಎಂಬಿತ್ಯಾದಿ ಮಾಹಿತಿಗಳನ್ನು ಗ್ರಾಹಕರ ಮುಂದೆ ಪ್ರದರ್ಶಿಸಲಾಗುತ್ತದೆ.

ಈ ಕಾರಣದಿಂದಾಗಿ ಗ್ರಾಹಕರು ಕಾಫಿಯನ್ನು ಕುಡಿಯುವುದು ಮಾತ್ರವಲ್ಲ, ಅದನ್ನು ಅನುಭವಿಸುತ್ತಿದ್ದಾರೆ.

ಈ ರೀತಿಯಾಗಿ ಕಾಫಿಯನ್ನು ಉತ್ತೇಜಿಸಿದರೆ ಉತ್ತಮವಾಗಿ ಕಾಫಿ ಉದ್ಯಮ ನಡೆಸಬಹುದಾಗಿದೆ.

ಈ ಹೊಸ ಕಾಫಿ ಅನುಭವ ಟ್ರೆಂಡ್‌ಗೆ ಬೆಳೆಗಾರರು, ಕಾಫಿ ಉದ್ಯಮಿಗಳು ಒಗ್ಗೂಡಿಕೊಳ್ಳುವುದು ಅತ್ಯಗತ್ಯ ಎಂದು ಬೆಂಗಳೂರು ಕಾಫಿ ಮಂಡಳಿಯ ಕಾಫಿ ಗುಣಮಟ್ಟ ವಿಭಾಗದ ನಿರ್ದೇಶಕರಾದ ಐಚೆಟ್ಟಿರ ಡಾ. ಮಂದಪ್ಪ ಅವರು ಸಲಹೆ ನೀಡಿದರು.

ಕಾಫಿ ದಸರಾ ಪ್ರಯುಕ್ತ ತಾ. ೨೪ ರಂದು ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ತಲೆಮಾರು ‘ಜೆನ್ ಆಲ್ಫಾ’ದ ಯುವಕ-ಯುವತಿಯರು ಇದೀಗ ಮದ್ಯ ಪಾರ್ಟಿ ಬದಲು ಕಾಫಿ ಪಾರ್ಟಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಳಿಗ್ಗೆ ಎದ್ದು ಡಿ.ಜೆ. ಕುಣಿತಕ್ಕೆ ಕುಣಿಯುವುದರೊಂದಿಗೆ ಕಾಫಿಯನ್ನು ಸೇವನೆ ಮಾಡುತ್ತಿದ್ದಾರೆ.

ಹಲವರ ಮನೆಗಳಲ್ಲಿ ಈ ಹಿಂದೆ ಇದ್ದ ಮದ್ಯದ ಬಾರ್ ಬದಲು ಇದೀಗ ಕಾಫಿ ಬಾರ್ ಕಲ್ಪನೆಯಲ್ಲಿ ವಿವಿಧ ಕಾಫಿ ತಳಿ, ಕಾಫಿಯ ವಿವಿಧ ರೂಪಗಳನ್ನು ಪ್ರದರ್ಶಿಸಿ ಅದರ ಸಂಪೂರ್ಣ ಅನುಭವ ಪಡೆಯುವಲ್ಲಿ ಬಹಳಷ್ಟು ಮಂದಿ ಆಸಕ್ತಿ ಹೊಂದಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಂಡು ಕಾಫಿ ಉದ್ಯಮವನ್ನು ಬೆಳೆಸಬಹುದಾಗಿದೆ ಎಂದರು.

ಕುಯ್ಲು ನಂತರ ನೀಡುವ ಗಮನ ಅತಿ ಮುಖ್ಯ

ಕಾಫಿ ಕುಯ್ಲಿನವರೆಗೆ ಮಾತ್ರ ಗಮನ ನೀಡಿದರೆ ಸಾಕಾಗುವುದಿಲ್ಲ. ಕಾಫಿ ಕುಯ್ಲಿನ ನಂತರ ಅದನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಹಲವಾರು ಪರಿಷ್ಕರಣಾ ಕ್ರಮಗಳನ್ನು ಪಾಲಿಸಿದರೆ ಉತ್ತಮ ದರ ದೊರಕಲಿದೆ.

ಈ ಪ್ರಕ್ರಿಯೆಗಳಿಗೆ ಬೆಳೆಗಾರರು ಗಮನ ನೀಡುವಂತಾಗಬೇಕೆAದರು. ಈ ಮೂಲಕ ಹೊಸ ರೀತಿಯ ಕಾಫಿ ಉತ್ಪನ್ನಗಳನ್ನು ತರಬಹುದಾಗಿದೆ. ಈ ಉತ್ಪನ್ನಗಳನ್ನು ಅವಕಾಶಗಳಿದ್ದಾಗ ಪ್ರದರ್ಶಿಸಬೇಕು. ಈ ಮೂಲಕ ಪ್ರಸಿದ್ಧತೆ ದೊರಕಿ ಮಾರುಕಟ್ಟೆಯಲ್ಲಿ ಇಂತಹ ಹೊಸ ಕಾಫಿ ಉತ್ಪನ್ನಗಳಿಗೆ ಬೇಡಿಕೆ ದೊರಕಲಿದೆ ಎಂಬುದಾಗಿ ತಿಳಿಸಿದರು.

ರೋಬಸ್ಟಾ, ಅರೇಬಿಕಾದೊಂದಿಗೆ ಲೈಬೀರಿಯಾ, ಎಕ್ಸೆಲ್ಸಾ ಹಾಗೂ ಮರ ಕಾಫಿ ತಳಿಗಳೂ ಇವೆ. ಕೊಡಗಿನ ಎಕ್ಸೆಲ್ಸಾ ತಳಿ ಜಪಾನ್‌ನಲ್ಲಿ ಪ್ರಸಿದ್ಧತೆ ಪಡೆದಿದೆ.

ಮರ ಕಾಫಿಗೂ ಮಾರುಕಟ್ಟೆ ಇದ್ದು ಇದನ್ನು ನಿರ್ಲಕ್ಷಿಸಬಾರದೆಂದರು. ಬೆಂಗಳೂರಿನ ಕಾಫಿ ಮಂಡಳಿಯಲ್ಲಿ ಕಾಫಿ ಉದ್ಯಮ ಸಂಬAಧ ತರಬೇತಿ ನೀಡಲಾಗುತ್ತಿದೆ.

ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಈ ಸಂದರ್ಭ ಅವರು ಹೇಳಿದರು.