ಚೆಯ್ಯಂಡಾಣೆ, ಸೆ. ೨೬: ಕುಂಜಿಲದ ವಿವಿಧೋದ್ದೇಶ ಸಹಕಾರ ದವಸ ಭಂಡಾರದ ೨೦೨೪-೨೫ನೇ ಸಾಲಿನ ೧೦೫ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.
ಕಕ್ಕಬೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಲ್ಯಾಟಂಡ ಎ. ತಮ್ಮಯ್ಯ ವಹಿಸಿದ್ದರು.
ನಂತರ ಮಾತನಾಡಿದ ಅವರು, ೨೦೨೪-೨೫ನೇ ಸಾಲಿನ ಕಾರ್ಯ ಕಲಾಪಗಳ ವಿವರಣೆಗಳನ್ನು ನೀಡಿ ಸಂಘದಲ್ಲಿ ಹಾಲಿ ೨೨೮ ಜನ ಸದಸ್ಯರಿದ್ದು ೨೦೨೪-೨೫ನೇ ಸಾಲಿಗೆ ರೂ. ೫೬,೩೦೪ ಲಾಭ ದೊರೆತಿದ್ದು, ದವಸ ಭಂಡಾರವು "ಬಿ" ಶ್ರೇಣಿಯಲ್ಲಿದೆ ಎಂದ ಅವರು, ದವಸ ಭಂಡಾರದ ಕಟ್ಟಡ ಹಳೆಯದಾಗಿದ್ದು ರಿಪೇರಿ ಖರ್ಚುಗಳು ಹೆಚ್ಚು ಬರುತ್ತಿದೆ. ದವಸ ಭಂಡಾರ ಕಟ್ಟಡದಿಂದ ದೊರೆಯುವ ಬಾಡಿಗೆ ಹಣದಿಂದ ಮುಂದುವರಿಯುತ್ತಿದೆ ಹಾಗೂ ಸದಸ್ಯರು ಹೆಚ್ಚು ಸದಸ್ಯರನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸಿ ಪೂರ್ವಜರು ಸ್ಥಾಪಿಸಿದ ದವಸ ಭಂಡಾರವನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಇದೆ ಸಂದರ್ಭ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕೈಬುಲಿರ ಅಪೇಕ್ಷಾ ಹಾಗೂ ೧೦ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಪದಾರ್ಥಿ ಎನ್. ಶ್ರೇಯ ಅವರಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಈ ಸಂದರ್ಭ ಉಪಾಧ್ಯಕ್ಷರಾದ ಪದಾರ್ಥಿ ಕೃಷ್ಣಯ್ಯ, ನಿರ್ದೇಶಕರಾದ ದಾಟಿ ಅಯ್ಯಪ್ಪ, ಎನ್.ಎಂ. ಸುಬ್ರಮಣಿ, ಕೆ.ಸಿ. ಪಳಂಗಪ್ಪ, ಪೇರಿಯಂಡ ಸೋಜಾ, ಕೈಬುಲಿರ ಅಯ್ಯಪ್ಪ, ಕಲಿಯಂಡ ಕಾಳಪ್ಪ, ಕಣೀಯರ ನಾಣಯ್ಯ, ಎಂ.ಎ. ಚೇತನ್, ಕಾರ್ಯದರ್ಶಿ ಕಂಬಿಯAಡ ಕುಂಞಪ್ಪ ಮತ್ತಿತರರು ಉಪಸ್ಥಿತರಿದ್ದರು.