ನಾಪೋಕ್ಲು, ಸೆ. ೨೭: ಜೀವನದಲ್ಲಿ ಹೋರಾಡುವ ಶಕ್ತಿ ಕ್ರೀಡಾಂಗಣದಲ್ಲಿ ಸಿಗಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್. ಚಿದಾನಂದ ಕುಮಾರ್ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಕೊಡಗು ಹಾಗೂ ನಾಪೋಕ್ಲುವಿನ ಸರ್ಕಾರಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಚೆರಿಯಪರಂಬುವಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೨೦೨೫ -೨೬ನೇ ಸಾಲಿನ ಮಡಿಕೇರಿ ತಾಲೂಕುಮಟ್ಟದ ಪದವಿಪೂರ್ವ ಕಾಲೇಜು ಬಾಲಕ, ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಡೆ ಒಂದು ಗುರುವಿನ ಹಾಗೆ. ಸೋಲು - ಗೆಲುವೆಂಬ ಸಮಬಾಳ್ವೆಯ ಪಾಠವನ್ನು ಕಲಿಸುತ್ತದೆ ಎಂದರು. ಕ್ರೀಡಾಕೂಟದ ಧ್ವಜಾರೋಹಣವನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ನೆರವೇರಿಸಿದರು. ಕರ್ನಾಟಕ ಪಬ್ಲಿಕ್ ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷರಾದ ಎನ್.ಎಸ್. ಉದಯಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭ ವೇದಿಕೆಯಲ್ಲಿದ್ದ ಗಣ್ಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಪಥಸಂಚಲನದ ಮೂಲಕ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ಉಪನ್ಯಾಸಕ ಗಗನ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಕ್ರೀಡಾಕೂಟದಲ್ಲಿ ಇಲ್ಲಿಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿಶಾಲ ಕುಶಾಲಪ್ಪ, ಮಡಿಕೇರಿ ತಾಲೂಕುವಿನ ವಿವಿಧ ಪದವಿಪೂರ್ವ ಕಾಲೇಜುಗಳ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.