ವೀರಾಜಪೇಟೆ, ಸೆ. ೨೭: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯದ ಹಣ ಬಿಡುಗಡೆ ಮಾಡಬೇಕು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೀರಾಜಪೇಟೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎ.ಸಿ ಸಾಬು ಕಟ್ಟಡ ಕಾರ್ಮಿಕರಿಗೆ ಕಾನೂನು ಬದ್ಧವಾಗಿರುವ ಸೌಲಭ್ಯಗಳು ಸಿಗುತ್ತಿಲ್ಲ ಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಕಳೆದ ಒಂದು ವರ್ಷದಿಂದ ಕೊಳೆಯುತ್ತಿವೆ. ಕಾರ್ಮಿಕರ ಜೀವನ ಕಷ್ಟಕ್ಕೆ ಸಿಲುಕಿದೆ. ಕಾರ್ಮಿಕರಿಗೆ ನೇರವಾಗಿ ಸಂದಾಯವಾಗುವ ಸೌಲಭ್ಯಗಳನ್ನು ಕೊಡಲು ನಿರಾಸಕ್ತಿ ಕಾಣುತ್ತಿದೆ. ನೋಂದಣಿ ಮತ್ತು ಮರು ನೋಂದಣಿಗಾಗಿ ಸಲ್ಲಿಸಲಾದ ಅರ್ಜಿಗಳನ್ನು ಸಕಾರಣವಿಲ್ಲದೆ ರದ್ದುಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೆಲಸದ ಸ್ಥಳಗಳಲ್ಲಿ ನಿರ್ಮಾಣ ಕೆಲಸಗಾರರಿಗೆ ರಕ್ಷಣೆ ಇಲ್ಲದಾಗಿದೆ ಮನೆ ನಿರ್ಮಾಣಕ್ಕೆ ೫ ಲಕ್ಷ ಸಹಾಯಧನ ಒದಗಿಸುವಂತಾಗಬೇಕು, ಶೈಕ್ಷಣಿಕ ಧನಸಹಾಯ ಕಾಲ ಕಾಲಕ್ಕೆ ಸರಿಯಾಗಿ ವಿತರಣೆಯಾಗುತ್ತಿಲ್ಲ. ಶೈಕ್ಷಣಿಕ ಧನಸಹಾಯ ಒದಗಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕಿಟ್‌ಗಳನ್ನು ನೀಡುವುದನ್ನು ಬಿಟ್ಟು ಕಾರ್ಮಿಕರ ಕಲ್ಯಾಣದ ಬಗ್ಗೆ ಚಿಂತನೆ ನಡೆಸಬೇಕು. ಸರಕಾರದ ವಿವಿಧ ಯೋಜನೆಗಳು ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ಕಟ್ಟಡ ಕಾರ್ಮಿಕರು ಇಂದು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಶಾಜಿ ರಮೇಶ್, ಜಿಲ್ಲಾ ಖಜಾಂಚಿ ಖಾಸಿಂ ಕೆ.ಎ., ವೀರಾಜಪೇಟೆ ತಾಲೂಕು ಅಧ್ಯಕ್ಷ ಕೆ.ಕೆ. ಹರಿದಾಸ್, ಪದಾಧಿಕಾರಿಗಳಾದ ಸಿ.ಎ. ಹಮೀದ್, ಸುಬ್ರಮಣಿ, ಆಲಿ, ನಾರಾಯಣ, ಲಲಿತಾಕ್ಷ, ಚೆಲುವರಾಜು, ಕುಮಾರ, ಪುಂಜಪ್ಪ ಸೇರಿದಂತೆ ಹಲವರು ಹಾಜರಿದ್ದರು