ಮಡಿಕೇರಿ, ಸೆ. ೨೭: ಕೊಡಗು ಜಿಲ್ಲೆಯಲ್ಲಿ ಆರೋಗ್ಯ ಸೇವೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ಕೊಡಗು ಜಿಲ್ಲೆಯ ಎರಡನೆಯ ಜಿಲ್ಲಾ ಆಸ್ಪತ್ರೆಯಾಗಿ ವೀರಾಜಪೇಟೆ ಆಸ್ಪತ್ರೆ ಪರಿವರ್ತನೆಯಾಗಲಿದೆ.

ಇದರಂತೆ ಮೊದಲ ಹಂತವಾಗಿ ಪ್ರಸ್ತುತ ಇರುವ ೬೦ ಬೆಡ್‌ಗಳ ಸಾಮರ್ಥ್ಯದ ಆಸ್ಪತ್ರೆ ಇದೀಗ ೨೫೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಲಿದ್ದು, ಇದಕ್ಕೆ ರಾಜ್ಯ ಸಚಿವ ಸಂಪುಟದಿAದ ಅನುಮೋದನೆ ದೊರೆತಿದೆ.

೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ವೀರಾಜಪೇಟೆ ಆಸ್ಪತ್ರೆಯನ್ನು ೪೦೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮಾಡುವುದಾಗಿ ಘೋಷಿಸಲಾಗಿತ್ತು. ಇದೀಗ ಮೊದಲ ಹಂತವಾಗಿ ಹಾಲಿ ಇರುವ ೬೦ ಹಾಸಿಗೆಗಳು +೧೯೦ ಹೆಚ್ಚುವರಿ ಹಾಸಿಗೆ ೨೫೦ ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಇದಕ್ಕಾಗಿ ರೂ. ೯೫.೬೦ ಕೋಟಿ ಅನುದಾನಕ್ಕೆ ಒಪ್ಪಿಗೆ ದೊರೆತಿದೆ ಎಂದು ಶಾಸಕ ಪೊನ್ನಣ್ಣ ಅವರು “ಶಕ್ತಿ''ಗೆ ತಿಳಿಸಿದ್ದಾರೆ. ಆಸ್ಪತ್ರೆಯ ಕಟ್ಟಡ ಇನ್ನಿತರ ವ್ಯವಸ್ಥೆಗಳಿಗಾಗಿ ರೂ. ೯೫.೬೦ ಕೋಟಿ ದೊರೆತಿದೆ. ಇದಲ್ಲದೆ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳಿಗಾಗಿ ಹೆಚ್ಚುವರಿಯಾಗಿ ರೂ. ೧೬.೫೫ ಕೋಟಿ ಹಾಗೂ ೧೮೪ ವಿವಿಧ ವೃಂದದ ಮಾನವ ಸಂಪನ್ಮೂಲಕ್ಕಾಗಿ ರೂ. ೧೬ ಕೋಟಿ ಅಗತ್ಯವಿದ್ದು, ಒಟ್ಟಾರೆ ವೆಚ್ಚವನ್ನು ರಾಜ್ಯ ಸರಕಾರದ ಅನುದಾನದಲ್ಲಿ ಭರಿಸಲು ಸಚಿವ ಸಂಪುಟದಿAದ ನಿರ್ಣಯವಾಗಿದೆ ಎಂದು ಪೊನ್ನಣ್ಣ ಖಾತ್ರಿಪಡಿಸಿದ್ದಾರೆ.

ಸದರಿ ಕಾಮಗಾರಿಯ ವಿಸ್ತೃತ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸರಕಾರದ ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಗೆ ಅಧಿಕಾರ ನೀಡಲೂ ಸಚಿವರ ಸಂಪುಟ ನಿರ್ಧರಿಸಿದೆ.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆ ಇನ್ನು ಮುಂದೆ ಜಿಲ್ಲಾ ಆಸ್ಪತ್ರೆಯ ಸ್ಥಾನಮಾನ ಪಡೆಯಲಿದ್ದು, ಇದು ಈ ವಿಭಾಗದ ಜನರಿಗೆ ಆರೋಗ್ಯ ಸೇವೆಗಾಗಿ ಸಾಕಷ್ಟು ಅನುಕೂಲವಾಗಲಿದೆ. ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸಿರುವುದಾಗಿ ಪೊನ್ನಣ್ಣ ಅವರು ತಿಳಿಸಿದ್ದಾರೆ.

ಗೋಣಿಕೊಪ್ಪಲು ಆಸ್ಪತ್ರೆಯೂ ಉನ್ನತೀಕರಣ

ದಕ್ಷಿಣ ಕೊಡಗಿನ ಗೋಣಿಕೊಪ್ಪಲು ಕೂಡ ಮತ್ತೊಂದು ಕೇಂದ್ರ ಸ್ಥಾನವಾಗಿದ್ದು, ಇದೀಗ ಗೋಣಿಕೊಪ್ಪಲು ಆಸ್ಪತ್ರೆಯೂ ಉನ್ನತೀಕರಣಗೊಳ್ಳಲಿದೆ. ೩೦ ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆ ೫೦ ಹಾಸಿಗೆಗಳ ಸಾಮರ್ಥ್ಯಕ್ಕೆ ಏರಲಿದೆ. ಇದಕ್ಕಾಗಿ ರೂ ೫.೭೫ ಕೋಟಿ ಅನುದಾನಕ್ಕೂ ಮಂಜೂರಾತಿಯಾಗಿದೆ ಎಂದು ಶಾಸಕರು ಮಾಹಿತಿಯಿತ್ತಿದ್ದಾರೆ.

ಸಮುದಾಯ ಕೇಂದ್ರವಾಗಿ ಹುದಿಕೇರಿ

ಪೊನ್ನಂಪೇಟೆ ತಾಲೂಕಿನ ಹುದಿಕೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇದೀಗ ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಳ್ಳಲಿದೆ. ಇದು ಕೂಡ ೫೦ ಹಾಸಿಗೆಯ ಸಾಮರ್ಥ್ಯದ ಕೇಂದ್ರವಾಗಲಿದೆ. ಇಲ್ಲಿಗೂ ರೂ. ೫.೭೫ ಕೋಟಿ ಅನುದಾನ ಮಂಜೂರಾತಿಯಾಗಿದ್ದು, ಇವರೆಡಕ್ಕೂ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಪೊನ್ನಣ್ಣ ಅವರು ತಿಳಿಸಿದ್ದಾರೆ.