ಗೋಣಿಕೊಪ್ಪಲು, ಸೆ. ೨೭: ೧ ಕೋಟಿ ೩೬ ಲಕ್ಷದ ವೆಚ್ಚದಲ್ಲಿ ಸಂಘಕ್ಕೆ ಸ್ವಂತ ನಿವೇಶನ ಖರೀದಿಸಲು ಮರ್ಚೆಂಟ್ಸ್ ಕೋ ಆಪರೇಟಿವ್ ಅನುಮೋದನೆ ದೊರೆಯಿತು. ಗೋಣಿಕೊಪ್ಪಲುವಿನ ದಿ ಮರ್ಚೆಂಟ್ಸ್ ಕೋ ಆಪರೇಟಿವ್ ಸೊಸೈಟಿಯ ೨೬ನೇ ವರ್ಷದ ಸಂಘದ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲುವಿನ ಉಮಾಮಹೇಶ್ವರಿ ದೇವಾಲಯದ ಸಭಾಂಗಣದಲ್ಲಿ ಮಹಾಸಭೆ ನಡೆಯಿತು.
ಕಟ್ಟಡ ನಿಧಿಯಲ್ಲಿ ೫೩ ಲಕ್ಷದ ೬೪ ಸಾವಿರ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಮಡಿಕೇರಿಯಲ್ಲಿ ೬೦ ಲಕ್ಷ ೧೯ ಸಾವಿರ ಹಣವಿದ್ದು, ಈ ಹಣದಿಂದ ನಿವೇಶನ ಖರೀದಿಸಲು ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ. ನಿವೇಶನ ಮಾಲೀಕರಿಗೆ ಮುಂಗಡ ಹಣವನ್ನು ನೀಡಲಾಗಿದೆ.
ಉಳಿದ ಮೊತ್ತವನ್ನು ಇಲಾಖೆಯ ಅನುಮತಿ ಪಡೆದ ನಂತರ ಹಣ ಸಂದಾಯ ಮಾಡಿ ನಿವೇಶನವನ್ನು ಸಂಘದ ಹೆಸರಿಗೆ ನೋಂದಾವಣಿ ಮಾಡಲಾಗುವುದು ಎಂದರು.
ಸಭೆಯಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಅಗತ್ಯ ಸಲಹೆಗಳನ್ನು ಸದಸ್ಯರು ನೀಡಿದರು. ಆಡಳಿತ ಮಂಡಳಿಯು ಸದಸ್ಯರ ಸಲಹೆ ಮೇರೆಗೆ ಮುಂದಿನ ದಿನದಲ್ಲಿ ಕೆಲವು ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿ ಸಂಘದ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚನವರು ಸದಸ್ಯರಿಗೆ ಭರವಸೆ ನೀಡಿದರು.
ಪ್ರಸ್ತುತ ೮೯೫ ಸದಸ್ಯರು ಸಂಘದಲ್ಲಿದ್ದು, ವರ್ಷಾಂತ್ಯಕ್ಕೆ ಸಾವಿರ ಸದಸ್ಯರನ್ನಾಗಿಸುವ ಗುರಿ ಹೊಂದಿದ್ದೇವೆ. ಸಂಘದಲ್ಲಿ ಪಿಗ್ಮಿ, ನಿರಖು, ವಿಶೇಷ ನಿರಖು, ಚಾಲ್ತಿ ಖಾತೆ, ಸಿಬ್ಬಂದಿ ಖಾತ್ರಿ, ಸಿಬ್ಬಂದಿ ಭವಿಷ್ಯನಿಧಿ, ಹಲವು ಠೇವಣಿಗಳು ೧೪ ಕೋಟಿ ೬೯ ಲಕ್ಷ ೪೩ ಸಾವಿರ ಸಂಗ್ರಹಿಸಲಾಗಿದೆ. ೯ ಕೋಟಿ ೬೯ ಲಕ್ಷ ಸಾಲ ವಿತರಿಸಲಾಗಿದೆ. ವೀರಾಜಪೇಟೆ ಹಾಗೂ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ೨ ಶಾಖೆಗಳಿವೆ ಎಂದರು.
ನಷ್ಟದಲ್ಲಿದ್ದ ಸಂಘವನ್ನು ಲಾಭದತ್ತ ಕೊಂಡೊಯ್ಯಲಾಗುತ್ತಿದೆ. ನ್ಯಾಯಾಲಯದ ಮೂಲಕ ಹಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
ಕಳೆದ ೨೫ ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವÀ ಸಂಘವು ಇದೀಗ ೨೬ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಬ್ಯಾಂಕ್ಅನ್ನು ಮತ್ತಷ್ಟು ಪ್ರಗತಿಯತ್ತ ಸಾಧಿಸಲು ಹಾಗೂ ಆದಾಯ ಕ್ರೋಢೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ನಿರ್ದೇಶಕರಾದ ಬಿ.ಎನ್. ಪ್ರಕಾಶ್, ಎನ್.ಕೆ. ದೇವಯ್ಯ, ಸಿ.ಡಿ. ಸುಬ್ಬಯ್ಯ, ಕುಲ್ಲೇಟೀರ ಪ್ರವಿ ಮೊಣ್ಣಪ್ಪ, ಎ.ಜೆ. ಬಾಬು, ಹೆಚ್.ಎನ್. ಮುರುಗನ್, ಗಿರೀಶ್ ಗಣಪತಿ, ಸಿ.ಡಿ. ಮಾದಪ್ಪ, ಕೆ.ಬಿ. ಪ್ರತಾಪ್, ಹೆಚ್.ವಿ. ಜಗದೀಶ್ (ಮಧು) ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್. ಕಾರ್ತಿಕ್ ವರದಿ ವಾಚಿಸಿದರು. ಸಿ.ಇ.ಒ. ಕಾರ್ತಿಕ್ ಪ್ರಾರ್ಥಿಸಿ, ಕಡೆಮಾಡ ಸುನೀಲ್ ಮಾದಪ್ಪ ವಂದಿಸಿದರು.