ಮಡಿಕೇರಿ, ಸೆ. ೨೭: ನಗರದ ಸ್ಟುಡಿಯೋವೊಂದರಲ್ಲಿ ಕಳ್ಳತನ ನಡೆದಿದ್ದು, ಬೆಲೆಬಾಳುವ ಪ್ರಿಂಟರ್ ಕಳವಾಗಿದೆ. ಇಲ್ಲಿನ ಕೊಹಿನೂರು ರಸ್ತೆಯ ಕಾಂಪ್ಲೆಕ್ಸ್ನಲ್ಲಿರುವ ಅಬ್ದುಲ್ ರೆಹಮಾನ್ ಅವರ ಫೋಟೋ ಸ್ಟುಡಿಯೋದಲ್ಲಿ ಘಟನೆ ನಡೆದಿದೆ.

ರಾತ್ರಿ ೯ ಗಂಟೆಗೆ ಸ್ಟುಡಿಯೋವನ್ನು ಮುಚ್ಚಿ ಅಬ್ದುಲ್ ರೆಹಮಾನ್ ತೆರಳಿದ್ದು, ಬೆಳಿಗ್ಗೆ ೯ ಗಂಟೆಗೆ ಬಂದ ಸಂದರ್ಭ ಶೆಲ್ಟರ್‌ನ ಬೀಗ ಒಡೆದು ಗಾಜಿನ ಬಾಗಿಲನ್ನು ಹಾನಿಗೊಳಿಸಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಮಹಜರು ಕೈಗೊಂಡರು. ಸಿಸಿ ಕ್ಯಾಮರ ಪರಿಶೀಲನೆ ವೇಳೆಯಲ್ಲಿ ಕಳ್ಳರು ಮುಸುಕುಧಾರಿಯಾಗಿ ಆಗಮಿಸಿರುವುದು ಕಂಡು ಬಂದಿದೆ. ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಟುಡಿಯೋದಲ್ಲಿ ಲಕ್ಷಾಂತರ ಮೌಲ್ಯದ ಕ್ಯಾಮರ ಇತ್ತು. ಅದು ಕಳ್ಳರ ಕಣ್ಣಿಗೆ ಬಿದ್ದಿಲ್ಲ. ಉಳಿದಂತೆ ಕಂಪ್ಯೂಟರ್ ಅನ್ನು ಕಳ್ಳರು ಚೆಲ್ಲಾಪಿಲ್ಲಿ ಮಾಡಿ ತೆರಳಿದ್ದಾರೆ ಎಂದು ಮಾಲೀಕ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.