ಸೋಮವಾರಪೇಟೆ, ಸೆ. ೨೮: ಗೌಡಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿ ೧೦ ವರ್ಷಗಳ ಕಾಲ ಕಾರ್ಯನಿರ್ವಹಿಸಿ ಇದೀಗ ವರ್ಗಾವಣೆಗೊಂಡಿರುವ ಎಸ್.ಪಿ. ಲಿಖಿತ ಅವರನ್ನು ಪಂಚಾಯಿತಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ವತಿಯಿಂದ ಶುಕ್ರವಾರ ಸನ್ಮಾನಿಸಿ ಬೀಳ್ಕೊಡಲಾಯಿತು.

ಪಂಚಾಯಿತಿ ಅಧ್ಯಕ್ಷ ಬಿ.ಎಚ್. ಮಂಜುನಾಥ್ ಸನ್ಮಾನಿಸಿ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತ ಅವರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ನರೇಗಾ ಯೋಜನೆಯ ಅನುದಾನವನ್ನು ಸದುಪಯೋಗಪಡಿಸಿಕೊಂಡು ಗ್ರಾಮೀಣ ಭಾಗದಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲು ಶಕ್ತಿಮೀರಿ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.

೨೦೨೦-೨೫ರ ಅಡಳಿತ ಮಂಡಳಿಯ ಅವಧಿಯಲ್ಲಿ ನರೇಗಾ ಯೋಜನೆಯಡಿ ೮೯ ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ. ಗ್ರಂಥಾಲಯ ಡಿಜಿಟಲೀಕರಣ, ಕೂಸಿನ ಮನೆ ಅನುಷ್ಠಾನ, ಗೌಡಳ್ಳಿ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್ ವಾಲಿಬಾಲ್ ಕೋರ್ಟ್, ಬಾಲಕ, ಬಾಲಕಿಯರಿಗೆ ಶೌಚಗೃಹ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯಾನ ನಿರ್ಮಾಣ, ಕಸವಿಲೇವಾರಿ ಘಟಕ ನಿರ್ಮಾಣ, ಅಮೃತ್ ಸರೋವರ ನಿರ್ಮಾಣ, ಗ್ರಾಮಗಳಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗಳು ನಡೆದಿವೆ. ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿರುವುದರಿಂದ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ಹೇಳಿದರು. ಪಂಚಾಯಿತಿ ಉಪಾಧ್ಯಕ್ಷರಾದ ಕೆ.ಎಂ. ರೋಹಿಣಿ, ಸದಸ್ಯರಾದ ನವೀನ್ ಅಜ್ಜಳ್ಳಿ, ಸಿ.ಇ. ವೆಂಕಟೇಶ್, ಜಿ.ಎಸ್. ನಾಗರಾಜ್, ಜಿ.ಜಿ. ಗಣೇಶ್, ಕೆ.ಡಿ. ವಿಶಾಲಾಕ್ಷಿ, ಜಿ.ಜಿ. ಮಲ್ಲಿಕಾ, ಕೆ.ಕೆ. ಸುಮಾ, ಗೌರಿ, ಸಿಬ್ಬಂದಿಗಳಾದ ಮಂಜಪ್ಪ, ಹೂವಯ್ಯ, ಭವನ್, ಮಂಜುನಾಥ್, ನಾಗರಾಜ್, ವನಿತಮಣಿ ಇದ್ದರು.