ಸಿದ್ದಾಪುರ, ಸೆ. ೨೮: ಅಭ್ಯತ್ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿಯ ಪಥದತ್ತ ದಾಪುಗಾಲು ಇಡುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ನೆಲ್ಲಿಹುದಿಕೇರಿಯಲ್ಲಿರುವ ಅಭ್ಯತ್ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ೨೦೨೪-೨೦೨೫ನೇ ಸಾಲಿನ ವಾರ್ಷಿಕ ಮಹಾಸಭೆಯ ವರದಿಯಲ್ಲಿ ಮಾಹಿತಿ ನೀಡÀಲಾಯಿತು.ಅಭ್ಯತ್ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ವಿ.ಕೆ. ಲೋಕೇಶ್ ಅವರ ತಾಯಿ ಅಕಾಲಿಕ ಮರಣ ಹೊಂದಿದ ಹಿನ್ನಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿ ವಾರ್ಷಿಕ ಮಹಾಸಭೆಯು ಉಪಾಧ್ಯಕ್ಷ ಕೆ.ಎ. ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ವರದಿಯನ್ನು ಸಂಘದ ನಿರ್ದೇಶಕ ಪಿ.ಸಿ. ಅಚ್ಚಯ್ಯ ವಾಚಿಸಿ, ಅಭ್ಯತ್ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿರುವ ವಿ.ಕೆ. ಲೋಕೇಶ್ ಮುಂದಾಳತ್ವದಲ್ಲಿ ಸಂಘವು ಪ್ರಗತಿಯತ್ತ ದಾಪುಗಾಲು ಇಡುತ್ತಿದೆ. ಸಂಘದಲ್ಲಿ ಉತ್ತಮ ಕಾರ್ಯ ಚಟುವಟಿಕೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು. ಸಂಘದ ವತಿಯಿಂದ ಸಂಘದ ಸದಸ್ಯರುಗಳಿಗೆ ಹಾಗೂ ಕೃಷಿಕರಿಗೆ ವಿವಿಧ ಯೋಜನೆಗಳಡಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು. ಈಗಾಗಲೇ ಸದಸ್ಯರ ಷೇರು ಏರಿಕೆ ಕಂಡುಬAದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಘದಲ್ಲಿ ಒಟ್ಟು ೧,೫೫೪ ಸದಸ್ಯರುಗಳಿದ್ದಾರೆ ಎಂದ ಅವರು, ಸಂಘದ ವತಿಯಿಂದ ನಡೆಸುತ್ತಿರುವ ಹಾರ್ಡ್ವೇರ್ ಹಾಗೂ ರಾಸಾಯನಿಕ ಗೊಬ್ಬರ ಮಾರಾಟದ ವ್ಯವಹಾರಗಳಲ್ಲಿ ಉತ್ತಮ ಲಾಭ ಪಡೆಯಲಾಗಿದೆ ಎಂದು ತಿಳಿಸಿದರು. ಈಗಾಗಲೇ ಸಂಘದ ವತಿಯಿಂದ ಪೆಟ್ರೋಲ್ ಬಂಕ್ ಪ್ರಾರಂಭಿಸಲು ಜಾಗ ಖರೀದಿಸಿದ್ದು, ಅದರ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ೧೦ನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಮತ್ತು ಗ್ರಾಮ ವ್ಯಾಪ್ತಿಯ ೨ ಶಾಲೆ - ಕಾಲೇಜುಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಮಹಾಸಭೆ ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಪಿ.ಸಿ. ಅಚ್ಚಯ್ಯ, ಕೆ.ಎಂ. ಪ್ರಸನ್ನ, ಟಿ.ಸಿ. ಅಶೋಕ, ವಿ.ಕೆ. ಸುನಿಲ್ ಹಾಗೂ ಇತರರು ಇದ್ದರು.