ವೀರಾಜಪೇಟೆ, ಸೆ. ೨೮: ವೀರಾಜಪೇಟೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೌರ ಕಾರ್ಮಿಕರ ಸೇವೆ ವಿಭಿನ್ನ ಹಾಗೂ ಅಭಿನಂದನಾರ್ಹವಾಗಿದೆ ಎಂದು ವೀರಾಜಪೇಟೆ ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಹೇಳಿದರು.

ವೀರಾಜಪೇಟೆ ಪುರಸಭೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲವು ಪೌರ ಕಾರ್ಮಿಕರ ತಂದೆಯ ಕಾಲದಿಂದ ಇಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇಂದಿನ ಪೀಳಿಗೆಯಲ್ಲಿ ನಾವು ಗಮನಿಸಿದಂತೆ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳ ಜೊತೆಗೆ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಸಹ ದೊರೆಯುತ್ತಿದೆ. ಪೌರ ಕಾರ್ಮಿಕರ ಶ್ರಮಕ್ಕೆ ಪೂರಕವಾಗಿ ನಾಗರಿಕರು ನಮ್ಮ ಜೊತೆಗೂಡಿ ಸಹಕರಿಸಿದರೆ ಉತ್ತಮ ಸ್ವಚ್ಛ ನಗರ ಮಾಡಲು ಸಾಧ್ಯ ಎಂದರು. ಪುರಸಭೆ ಮುಖ್ಯಾಧಿಕಾರಿ ಪಿ.ಎನ್. ನಾಚಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪೌರ ಕಾರ್ಮಿಕರೆಂದರೆ ನಗರದಲ್ಲಿನ ಜನರ ಆರೋಗ್ಯ ಕಾಪಾಡುವ ವೈದ್ಯರು ಎಂದು ಹೇಳಬಹುದು. ಆರೋಗ್ಯ ಕಾಪಾಡುವಲ್ಲಿ ಸ್ವಚ್ಛತೆಯನ್ನು ನಿರ್ವಹಿಸುತ್ತಾರೆ. ಅದರ ಜೊತೆಯಲ್ಲಿ ಅವರ ಬದುಕು, ಆರೋಗ್ಯ ಮಕ್ಕಳ ಶಿಕ್ಷಣದ ಬಗ್ಗೆ ನಾವು ಕಾಳಜಿ ವಹಿಸಬೇಕಿದೆ. ಸರಕಾರದಿಂದ ಉತ್ತಮ ಸೌಲಭ್ಯ ಅವರಿಗೆ ಸಿಗುತ್ತಿದೆ ಎಂದರು. ಸಭೆಯನ್ನು ಉದ್ದೇಶಿಸಿ ಜಿಲ್ಲಾ ಪೌರ ನೌಕರರ ಸೇವಾ ಸಂಘದ ಅಧ್ಯಕ್ಷ ಇರ್ಫಾನ್ ಮತ್ತಿತರರು ಈ ಸಂದರ್ಭ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಫಸಿಯಾ ತಬಸುಂ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಲೀಲ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮ, ಪರಿಸರ ಅಭಿಯಂತರ ನೀತು ಸಿಂಗ್, ಪುರಸಭೆ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.