ನಾಪೋಕ್ಲು, ಸೆ. ೨೮: ಹಿಂದೂ ಧರ್ಮದ ಪ್ರತಿಯೊಂದು ಮಂತ್ರದ ಸಾರ ಸರ್ವರ ಒಳಿತನ್ನು ಬಯಸುವುದೇ ಆಗಿದೆ ಎಂದು ಉಪನ್ಯಾಸಕ ಪಟ್ಟಡ ಶಿವಕುಮಾರ್ ಹೇಳಿದರು.

ಮದೆ ಗ್ರಾಮದ ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಅವರು, ಹಿಂದೂ ಧರ್ಮ ಪ್ರತಿಯೊಬ್ಬರ ಭಾವನೆಗಳಿಗೆ ಬೆಲೆ ನೀಡಿ, ಅವರಿಗಿಷ್ಟ ಬಂದ ರೀತಿಯಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಲು ಅವಕಾಶ ನೀಡಿದೆ. ಆದ್ದರಿಂದಲೇ ಇಲ್ಲಿ ಭಗವಂತನನ್ನು ಹಲವು ರೂಪದಲ್ಲಿ ಹಾಗೂ ಹಲವು ವಿಧಾನಗಳಲ್ಲಿ ಪೂಜಿಸುವ ಅವಕಾಶ ದೊರೆತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದೆನಾಡು ಕಾಫಿ ಲಿಂಕ್ಸ್ ಉದ್ಯಮಿ ಬಿ.ಸಿ. ಕೀರ್ತಿ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಜೋಡುಪಾಲ ಗೌರಿ ಗಣೇಶ ಸಮಿತಿ ಅಧ್ಯಕ್ಷ ದೀಕ್ಷಿತ್, ೨ನೇ ಮೊಣ್ಣಂಗೇರಿಯ ಬಿ.ಎಂ. ಬಾಬು, ಬೆಂಗಳೂರಿನ ಲೋಕನಾಥ್ ಮುಳ್ಯ, ಜೋಡುಪಾಲದ ಜಸ್ಮಿತಾರಾಜು, ಭವ್ಯ ಸಣ್ಣಮನೆ ಉಪಸ್ಥಿತರಿದ್ದರು.

ಚಾಮುಂಡೇಶ್ವರಿ ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ.ಆರ್. ರಾಜು ಸ್ವಾಗತಿಸಿ, ಧರ್ಮಸ್ಥಳ ಜನಜಾಗೃತಿ ಸಮಿತಿ ಉಪಾಧ್ಯಕ್ಷ ಅಗೋಳಿಕಜೆ ಧನಂಜಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.