ಕೂಡಿಗೆ, ಸೆ. ೨೮: ಸೋಮವಾರಪೇಟೆ, ಕುಶಾಲನಗರ ತಾಲೂಕಿನ ಗಿರಿಜನ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಆರ್. ಅರುಣ್ ರಾವ್ ಅಧ್ಯಕ್ಷತೆಯಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಕಳೆದ ಬಾರಿಯ ನಡಾವಳಿ ಓದಿ ಅಂಗೀಕರಿಸಲಾಯಿತು. ೨೦೨೪-೨೫ನೇ ಸಾಲಿನ ಆಡಳಿತ ಮಂಡಳಿ ವರದಿ, ಲೆಕ್ಕ ಪರಿಶೀಲನಾ ವರದಿ, ೨೦೨೫-೨೬ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿ ಅಂಗೀಕರಿಸಲಾಯಿತು. ಮುಂಬರುವ ಸಾಲಿಗೆ ಲೆಕ್ಕ ಪರಿಶೋಧಕರ ಆಯ್ಕೆ ಮಾಡುವುದು, ಹಿಂದಿನ ಸಾಲಿನ ಬಜೆಟ್‌ಗಿಂತ ಹೆಚ್ಚಿನ ಖರ್ಚಿನ ಅನುಮೋದನೆ ಪಡೆಯಲಾಯಿತು.

ಸಭೆಯಲ್ಲಿ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ವಿಷಯಗಳ ಬಗ್ಗೆ ಸದಸ್ಯರಿಂದ ಸಲಹೆ ಸೂಚನೆ, ಚರ್ಚೆ ನಡೆದವು. ಕಿರು ಅರಣ್ಯ ಉತ್ಪನ್ನ ಸಂಗ್ರಹ, ವ್ಯಾಪಾರ ಯೋಜನೆಗಳು, ಸದಸ್ಯರು ಸಕ್ರಿಯ ವಹಿವಾಟು ನಡೆಸುವುದು, ಸದಸ್ಯತ್ವ ನೀಡುವುದು ಮತ್ತಿತರ ವಿಚಾರಗಳಿಗೆ ಸಂಬAಧಿಸಿದAತೆ ಚರ್ಚೆಗಳು ನಡೆದವು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಆರ್. ಅರುಣ್ ರಾವ್, ಸಂಘವನ್ನು ಲಾಭದತ್ತ ಕೊಂಡೊಯ್ಯಲು ಸದಸ್ಯರ ಸಹಕಾರ ಅತಿಮುಖ್ಯ. ಅರಣ್ಯ ಕಿರು ಉತ್ಪನ್ನಗಳ ಸಂಗ್ರಹ, ಮಾರಾಟಕ್ಕೆ ಪೂರಕವಾದ ನೂತನ ಕಟ್ಟಡ ನಿರ್ಮಾಣದ ಚಿಂತನೆ ಹೊಂದಲಾಗಿದೆ. ಸದಸ್ಯತ್ವ ಹೆಚ್ಚಳಕ್ಕೆ ಕೂಡ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಸದಸ್ಯರಿಗೆ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಆಡಳಿತ ಮಂಡಳಿ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಕಾವೇರಿ, ನಿರ್ದೇಶಕರಾದ ಸಿ.ಕೆ. ಉದಯಕುಮಾರ್, ಬಿ.ಎ. ಗಂಗಾಧರ್, ಎಸ್.ಆರ್. ಕಮಲ, ಕಾಳಯ್ಯ, ದೇವಿರಮ್ಮ, ಬಿ.ಎಸ್ ಚಂದ್ರು, ಶ್ಯಾಮ್, ಗಿರಿಜನ ಸಮಗ್ರ ಅಭಿವೃದ್ಧಿ ಅಧಿಕಾರಿ ಸಿದ್ದರಾಜ್, ಪದನಿಮಿತ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹನಿಕುಮಾರ್, ಸೇರಿದಂತೆ ನೂರಾರು ಸಂಘದ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು.