ದುಬೈ, ಸೆ. ೨೯: ದುಬೈನಲ್ಲಿ ಆಯೋಜನೆಗೊಂಡಿದ್ದ ಏಷ್ಯಾ ಕಪ್ ಟಿ೨೦ ಕ್ರಿಕೆಟ್ ನ ಅಂತಿಮ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ತಂಡವನ್ನು ೫ ವಿಕೆಟ್‌ಗಳ ಅಂತರದಲ್ಲಿ ಸೋಲಿಸಿ ೯ ನೇ ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಆದರೆ ಟ್ರೋಫಿ ಹಾಗೂ ವೈಯಕ್ತಿಕ ಪದಕಗಳನ್ನು ಪಡೆಯದೆ ಭಯೋತ್ಪಾದನೆ ಪ್ರೋತ್ಸಾಹಿ ಪಾಕ್ ವಿರುದ್ಧ ತಂಡದ ಆಟಗಾರರು ಧಿಕ್ಕರಿಸಿದರು.
ತಾ.೨೮ ರಂದು ತಡರಾತ್ರಿ ಸಮಾಪ್ತಿಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡ ೧೯.೧ ಓವರ್‌ಗಳಲ್ಲಿ ೧೪೬ ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದನ್ನು ಬೆನ್ನಟ್ಟಿದ ಭಾರತ, ೧೯.೪ ಓವರ್‌ಗಳಲ್ಲಿ ೫ ವಿಕೆಟ್‌ಗಳನ್ನು ಕಳೆದುಕೊಂಡು ಈ ಮೊತ್ತವನ್ನು ಸಾಧಿಸಿ ಚಾಂಪಿಯನ್‌ಪಟ್ಟ ಅಲಂಕರಿಸಿತು.
ಟ್ರೋಫಿಯನ್ನು ಏಷಿಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ, ಪಾಕಿಸ್ತಾನಿ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಗೂ ಪಾಕಿಸ್ತಾನಿ ಸಚಿವ ಕೂಡ ಆಗಿರುವ ಮಹಮದ್ ನಖ್ವಿ ಹಸ್ತಾಂತರ ಮಾಡಲಿದ್ದ ಕಾರಣ ಟ್ರೋಫಿಯನ್ನು ಸ್ವೀಕರಿಸದೆ ಭಾರತ ತಂಡವು ತನ್ನ ವಿರೋಧ ಪ್ರದರ್ಶಿಸಿತು. ಟೂರ್ನಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನವನ್ನು ೨ ಬಾರಿ ಸೋಲಿಸಿದ್ದ ಭಾರತ ತಂಡ, ಪಂದ್ಯ ಮುಗಿದ ಬಳಿಕ ಪಾಕ್ ಆಟಗಾರರೊಡನೆ ಹಸ್ತಲಾಘವ ಮಾಡದೇ ಇರಲು ನಿರ್ಧರಿಸಿತ್ತು. ಇದೀಗ ಟೂರ್ನಿಯ ಚಾಂಪಿಯನ್‌ಪಟ್ಟ ಅಲಂಕರಿಸಿದ ಬಳಿಕ ಟ್ರೋಫಿ ಹಾಗೂ ಪದಕವನ್ನು ಪಾಕಿಸ್ತಾನಿ ಸಚಿವರಿಂದ ಪಡೆಯಲು ನಿರಾಕರಿಸಿತು. ಪಂದ್ಯ ಮುಗಿದ ಬಳಿಕ ೧೫ ನಿಮಿಷಗಳ ಕಾಲ ಪೋಡಿಯಮ್‌ನಲ್ಲಿ ಕಾದು ಕುಳಿತ ಮಹಮದ್ ನಖ್ವಿ ಭಾರತ ತಂಡದ ಯಾರೂ ಬಾರದೇ ಇದ್ದ ಕಾರಣ ಟ್ರೋಫಿಯನ್ನು ಮೈದಾನದಿಂದಾಚೆಗೆ ಕೊಂಡೊಯ್ದ ಘಟನೆ ನಡೆಯಿತು.