ಸೋಮವಾರಪೇಟೆ, ಸೆ. ೨೯: ಇಲ್ಲಿನ ಮಡಿಕೇರಿ ರಸ್ತೆಯ ಮಾನಸ ಹಾಲ್ ಸಮೀಪ, ಜೈ ಭಾರತ್ ಯುವಕ ಸಂಘದ ಆಶ್ರಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಕೊಂಡೊಯ್ದು ಆನೆಕೆರೆಯಲ್ಲಿ ವಿಸರ್ಜಿಸಲಾಯಿತು.
ವಿಸರ್ಜನೋತ್ಸವ ಅಂಗವಾಗಿ ಬೆಳಗ್ಗಿನಿಂದಲೇ ಪೆಂಡಾಲ್‌ನಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಉತ್ಸವ ಮೂರ್ತಿಗಳಿಗೆ ಅಲಂಕಾರ ಪೂಜೆ, ಗಣಪತಿ ಹೋಮ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು.
ಸಂಜೆ ಅಲಂಕೃತ ಮಂಟಪದಲ್ಲಿ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ, ವಾದ್ಯಗೋಷ್ಠಿ, ಅಬ್ಬರದ ಸಂಗೀತ, ಡಿಜೆ ಸೌಂಡ್ಸ್ನೊAದಿಗೆ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ವಿವೇಕಾನಂದ ವೃತ್ತ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಡಿ.ಜೆ. ಕ್ರಿವ್ಸ್ ಹರ್ಷ ತಂಡದಿAದ ಸಿಂಧೂರ ಗಣಪ ಕಥಾ ಸಾರಾಂಶವುಳ್ಳ ಸ್ತಬ್ಧಚಿತ್ರಗಳ ಚಲನ ವಲನ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಬೆಂಗಳೂರಿನ ಪ್ರೀತಿ ಸೌಂಡ್ಸ್ ತಂಡದ ಸಂಗೀತಕ್ಕೆ ಯುವ ಸಮೂಹ ಹೆಜ್ಜೆ ಹಾಕಿ ಸಂಭ್ರಮಿಸಿತು. ಸಾವಿರಾರು ಮಂದಿ ಟ್ಯಾಬ್ಲೋ ಪ್ರದರ್ಶನವನ್ನು ವೀಕ್ಷಿಸಿದರು.
ಭವ್ಯ ಮೆರವಣಿಗೆಯ ನಂತರ ಪಟ್ಟಣದ ಆನೆಕೆರೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಸಮಿತಿಯ ಅಧ್ಯಕ್ಷ ಹೆಚ್.ಎನ್. ಕೇಶವ, ಕಾರ್ಯಾಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಸುಬ್ರಮಣಿ, ಸಲಹೆಗಾರ ಚಿಂತು, ಅರುಣ್‌ಕುಮಾರ್, ಉಪಾಧ್ಯಕ್ಷ ರಾಮದಾಸ್, ಕುಶಾಲ, ಪ್ರಧಾನ ಕಾರ್ಯದರ್ಶಿ ಸುಚೇತನ್ ಸ್ವರೂಪ್, ಖಜಾಂಚಿ ಶಿವಕುಮಾರ್, ಎಸ್.ಕೆ. ಪ್ರಜ್ವಲ್ ಸೇರಿದಂತೆ ಪದಾಧಿಕಾರಿಗಳು ಉತ್ಸವದ ಉಸ್ತುವಾರಿ ವಹಿಸಿದ್ದರು.