ಚೆಯ್ಯಂಡಾಣೆ, ಸೆ. ೨೯: ಸುನ್ನಿ ಜಂಇಯ್ಯತ್ತುಲ್ ಮುಅಲ್ಲಿಮೀನ್ (ಎಸ್ ಜೆಎಂ) ಮೂರ್ನಾಡು ರೇಂಜ್ ಹಾಗೂ ಎಸ್ ವೈ ಎಸ್ ಮಡಿಕೇರಿ ಝೋನ್ ಸಂಯುಕ್ತಾಶ್ರಯದಲ್ಲಿ ಮೊಹಮ್ಮದ್ ಪೈಗಂಬರ್ (ಸ) ರವರ ೧೫೦೦ನೇಯ ಜನ್ಮ ದಿನಾಚರಣೆಯ ಅಂಗವಾಗಿ ಮೂರ್ನಾಡು ಪಟ್ಟಣದಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾ ನಡೆಯಿತು.

ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಶುದ್ದೀನ್ ಅಂಜ್ಜದಿ ಪ್ರಾರ್ಥನೆ ನೆರವೇರಿಸುವ ಮೂಲಕ ಸಂದೇಶ ಜಾಥಾಕ್ಕೆ ಚಾಲನೆ ನೀಡಿದರು. ಮೂರ್ನಾಡು ಕಾಲೇಜು ಮೈದಾನದಿಂದ ಆರಂಭಗೊAಡ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಬಸ್ ನಿಲ್ದಾಣದಲ್ಲಿ ಸಮಾಪನಗೊಂಡಿತು. ಜಾಥಾದಲ್ಲಿ ರೇಂಜ್‌ಗೆ ಒಳಪಟ್ಟ ೧೮ ಮದ್ರಸ ವಿಧ್ಯಾರ್ಥಿಗಳ ದಫ್ ಪ್ರದರ್ಶನ, ಸ್ಕೌಟ್, ಪ್ಲವರ್ ಶೋ, ಪ್ರವಾದಿ ಕೀರ್ತನೆ ನೋಡುಗರ ಗಮನ ಸೆಳೆಯಿತು.

ಜಾಥಾವನ್ನು ಉದ್ದೇಶಿಸಿ ಎಸ್‌ಜೆಎಂ ಜಿಲ್ಲಾ ಉಪಾಧ್ಯಕ್ಷರಾದ ಹನೀಫಾ ಸಖಾಫಿ ಕೊಂಡAಗೇರಿ ಮಾತನಾಡಿ ಮೊಹಮ್ಮದ್ ಪೈಗಂಬರ್ (ಸ.ಅ) ರವರ ಜೀವನ ಶೈಲಿ,ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು, ಅವರ ಶಾಂತಿಯ ಸಂದೇಶ ಎಲ್ಲರಿಗೂ ಮಾದರಿಯಾಗಬೇಕೆಂದರು. ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಮಾತನಾಡಿ ಶಾಂತಿಯ ಸೌಹಾರ್ದತೆಯ ಧರ್ಮ ಇಸ್ಲಾಂ, ಇಸ್ಲಾಂ ಎಂದು ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂದರು.

ಈ ಸಂದರ್ಭ ಎಸ್‌ಜೆಎಂ ಜಿಲ್ಲಾಧ್ಯಕ್ಷರಾದ ಅಬ್ದುಲ್ಲ ಸಖಾಫಿ, ಹಂಝ ರಹ್ಮನಿ, ಮೂರ್ನಾಡು ಜಮಾಅತ್ ಪದಾಧಿಕಾರಿಗಳು, ಮೈಮ ಸಂಘಟನೆಯ ಪ್ರಮುಖರು ಸೇರಿದಂತೆ ಸುನ್ನೀ ಸಂಘ ಕುಟುಂಬದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.