ಕಣಿವೆ, ಸೆ. ೩೦: ಕುಶಾಲನಗರ ತಾಲೂಕಿನ ಪ್ರಮುಖ ಪ್ರವಾಸಿ ಕೇಂದ್ರ ಹಾರಂಗಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಕೂಡಿಗೆ ಹುಲಗುಂದ ಮಾರ್ಗದ ಹೆದ್ದಾರಿಯಲ್ಲಿನ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊAಡು ವರ್ಷ ಕಳೆದರೂ ಕೂಡ ಪೂರ್ಣಗೊಳ್ಳದ ಕಾರಣ ಸಾರ್ವಜನಿಕರು ಮಂಗಳವಾರ ಕುಶಾಲನಗರದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರ ಕÀಚೇರಿ ಬಳಿ ಪ್ರತಿಭಟನೆ ನಡೆಸಿದರು.
ಕೂಡುಮಂಗಳೂರು ಗಾ.್ರಪಂ. ಅಧ್ಯಕ್ಷ ಭಾಸ್ಕರನಾಯಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು, ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸದ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲಾಖಾಧಿಕಾರಿಗಳು ಕಾಮಗಾರಿಯನ್ನು ಸಮರ್ಪಕವಾಗಿ ಪರಿಶೀಲಿಸದ ಕಾರಣ ಗುತ್ತಿಗೆದಾರರು ಆಮೆ ಗತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಹುಲಗುಂದ ಮಾರ್ಗವಾಗಿ ಸಂಚರಿಸುವ ಯಡವನಾಡು, ಹಾರಂಗಿ, ಅತ್ತೂರು ಮೊದಲಾದ ಗ್ರಾಮಗಳ ರೈತರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ.
ಹಾರಂಗಿ ಜಲಾಶಯ ಹಾಗೂ ಜಲಾಶಯದ ಬಲ ಬದಿಯಲ್ಲಿನ ಅರಣ್ಯ ಇಲಾಖೆಯ ಸಾಕಾನೆ ಶಿಬಿರಕ್ಕೆ ದೂರದ ನಗರಗಳಿಂದ ಆಗಮಿಸುವ ಪ್ರವಾಸಿಗರಿಗೂ ಅನಾನುಕೂಲವಾಗುತ್ತಿದೆ. ಈಗಾಗಲೇ ಹಲವು ಪ್ರವಾಸಿ ವಾಹನಗಳು ಅಪಘಾತಕ್ಕೆ ತುತ್ತಾಗಿವೆ ಎಂದು ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ ದೂರಿದರು.
ಕೂಡಲೇ ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರರು ಸ್ಥಳಕ್ಕೆ ಧಾವಿಸಿ ಕಾಮಗಾರಿಯನ್ನು ಪರಿಶೀಲಿಸಿ ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.
ಇಲಾಖೆಯ ಸಹಾಯಕ ಅಭಿಯಂತರೆ ಸೌಮ್ಯ ಮತ್ತಿತರರು ಪ್ರತಿಭಟನಾಕಾರರ ಮನವಿಯನ್ನು ಆಲಿಸಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.