ಮಡಿಕೇರಿ, ಅ. ೪: ನಾಡಿನ ಜೀವನದಿ ಕಾವೇರಿಯ ತವರು ತಲಾಕಾವೇರಿ ಕ್ಷೇತ್ರದಲ್ಲಿ ತಾ.೧೭ರಂದು ತುಲಾ ಸಂಕ್ರಮಣ ಸಂದರ್ಭದಲ್ಲಿ ನಡೆಯುವ ಪವಿತ್ರ ತೀರ್ಥೋದ್ಭವದ ಹಿನ್ನೆಲೆ ಅಗತ್ಯ ಸಿದ್ಧತೆಗಳು ಆರಂಭಗೊAಡಿವೆ. ತೀರ್ಥೋದ್ಭವದ ದಿನಕ್ಕೆ ೧೨ ದಿನಗಳಷ್ಟೇ ಬಾಕಿ ಉಳಿದಿವೆ. ಈಗಾಗಲೇ ಪತ್ತಾಯಕ್ಕೆ ಅಕ್ಕಿಹಾಕುವ ಸಂಪ್ರದಾಯ ಪೂರ್ಣಗೊಂಡಿದ್ದು, ಇಂದು ಆಜ್ಞಾ ಮುಹೂರ್ತ ನೆರವೇರಿದೆ. ಜಾತ್ರೋತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಇತರೆ ನಿರ್ವಹಣೆಗಾಗಿ ಕಾವೇರಿ ನೀರಾವರಿ ನಿಗಮದಿಂದ ರೂ. ೨ ಕೋಟಿ ಹಾಗೂ ವಿಶೇಷವಾಗಿ ಜಾತ್ರೋತ್ಸವಕ್ಕೆ ಕಳೆದ ವರ್ಷದಂತೆ ಈ ಬಾರಿಯೂ ಮುಜರಾಯಿ ಇಲಾಖೆಯ ಮೂಲಕ ರೂ. ೭೫ ಲಕ್ಷ ಅನುದಾನಕ್ಕೆ ಮಂಜೂರಾತಿಯಾಗಿದೆ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಪ್ರಸ್ತುತ ಹಲವು ಸಿದ್ಧತೆ ಕೆಲಸ ಕಾರ್ಯಗಳು ಆರಂಭಗೊAಡಿವೆ. ಜಾತ್ರೆ ಸಂದರ್ಭದಲ್ಲಿ ಲೈಟಿಂಗ್, ಹೂವಿನ ಅಲಂಕಾರ, ವೇದಿಕೆ, ಎಲ್.ಇ.ಡಿ ವ್ಯವಸ್ಥೆ ಇತ್ಯಾದಿಗಳಿಗೆ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಜಾತ್ರೆ ಸಂದರ್ಭ ೨೫ ಕೆ.ಎಸ್.ಆರ್.ಟಿ.ಸಿ. ಬಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಎರಡು ಆ್ಯಂಬ್ಯುಲೆನ್ಸ್ ಸೇರಿದಂತೆ ಭಾಗಮಂಡಲದಲ್ಲಿ ವಿಶೇಷ ವೈದ್ಯರು ಕರ್ತವ್ಯ ನಿರ್ವಹಿಸಲಿದ್ದಾರೆ. ಇನ್ನಿತರ ಸಿದ್ಧತೆಗಳು ಜಿಲ್ಲಾಡಳಿತದ ಮೂಲಕ ನಡೆಯುತ್ತಿರುವುದಾಗಿ ಪೊನ್ನಣ್ಣ ತಿಳಿಸಿದರು.
ತೀರ್ಥೋದ್ಭವದ ದಿನದಂದು ಇಡೀ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸುವ ಚಿಂತನೆಯನ್ನು ಈ ಬಾರಿ ಮಾಡಲಾಗಿದೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಕೆಲವರು ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು, ಇದರಂತೆಯೂ ಕ್ರಮವಹಿಸಲಾಗುತ್ತಿದೆ ಎಂದು ಅವರು ವಿವರವಿತ್ತರು.
ತಲಕಾವೇರಿಗೆ ತೆರಳುವ ರಸ್ತೆ ಪ್ರಸ್ತುತ ಹಾನಿಗೀಡಾಗಿರುವುದು ನಿಜ ಆದರೆ ಮಳೆಯ ಕಾರಣದಿಂದಾಗಿ ರಸ್ತೆ ಕೆಲಸ ತಡವಾಗಿದೆ. ಪ್ರಸ್ತುತ ತೀರ್ಥೋದ್ಭವದ ವೇಳೆಗೆ ತಾತ್ಕಾಲಿಕವಾಗಿ ರಸ್ತೆ ಸರಿಪಡಿಸುವ ಕೆಲಸ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು. ಮುಜರಾಯಿ ಇಲಾಖೆಯ ಮುಖಾಂತರ ಈ ವರ್ಷವೂ ಜಾತ್ರೆಯ ಸಿದ್ಧತೆಗೆ ರೂ. ೭೫ ಲಕ್ಷ ಅನುದಾನ ನೀಡಲಾಗಿದೆ. ಇದರಲ್ಲಿ ತೀರ್ಥೋದ್ಭವದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗುವುದು. ಕಳೆದ ವರ್ಷವೂ ಜಾತ್ರೆಗೆಂದೇ ರೂ. ೭೫ ಲಕ್ಷವನ್ನು ವಿಶೇಷವಾಗಿ ನೀಡಲಾಗಿತ್ತು ಎಂದು ಅವರು ತಿಳಿಸಿದರು.
ನೀರಾವರಿ ನಿಗಮದಿಂದ ರೂ. ೨ ಕೋಟಿ
ಕಾವೇರಿ ನೀರಾವರಿ ನಿಗಮದ ಮೂಲಕ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಭಾಗಮಂಡಲ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿಯ ಇನ್ನಿತರ ನಿರ್ವಹಣೆಗಾಗಿ ರೂ. ೨ ಕೋಟಿ ಅನುದಾನ ಬರಲಿದೆ ಎಂದು ಅವರು ತಿಳಿಸಿದರು.