ಮಡಿಕೇರಿ, ಅ. ೪: ನಿನ್ನೆ ಬೆಳಿಗ್ಗೆ ಮಡಿಕೇರಿ ದಸರಾ ಕಲಾ ಸಂಭ್ರಮ ವೇದಿಕೆಯಲ್ಲಿ ದಶಮಂಟಪಗಳ ಬಹುಮಾನ ವಿತರಣೆ ವೇಳೆ ವೇದಿಕೆ ಏರಿ ತೀರ್ಪುಗಾರಿಕೆ ವಿರುದ್ಧ ಧಿಕ್ಕಾರ ಕೂಗಿ ವೇದಿಕೆ ಮೇಲಿದ್ದ ಪರಿಕರಗಳನ್ನು ಎಸೆದು ದಾಂಧಲೆ ನಡೆಸಿದ ಘಟನೆಗೆ ಸಂಬAಧಿಸಿದAತೆ ಮೂವರ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀರ್ಪುಗಾರರು ನೀಡಿದ ದಶಮಂಟಪಗಳ ಬಹುಮಾನÀದ ತೀರ್ಪನ್ನು ದಸರಾ ವೇದಿಕೆಯಲ್ಲಿ ದಸರಾ ಸಮಿತಿಯವರು ಘೋಷಣೆ ಮಾಡಿದ ಸಂದರ್ಭ ವೇದಿಕೆಯ ಮುಂಭಾಗದಲ್ಲಿ ನಿಂತಿದ್ದ ಕರವಲೆ ಭಗವತಿ ದಸರಾ ಸಮಿತಿಯನ್ನು ಬೆಂಬಲಿಸುತ್ತಿದ್ದ ಸುಮಾರು ೩೦-೪೦ ಮಂದಿ ತೀರ್ಪುಗಾರಿಕೆಯಲ್ಲಿ ನಮಗೆ ತಾರತಮ್ಯವಾಗಿದೆ, ಅನ್ಯಾಯವಾಗಿದೆ, ಮೋಸ, ಮೋಸ ಎಂದು ಧಿಕ್ಕಾರ ಕೂಗಿದರು. ಬಳಿಕ ಪವನ್ ಕುಮಾರ್ ಕೆ.ಆರ್., ಕರವಲೆ ಭಗವತಿ ದಸರಾ ಮಂಟಪ ಸಮಿತಿಯ ಅಧ್ಯಕ್ಷ ವಿನೋದ್ ಕಾರ್ಯಪ್ಪ, ಸುಹಾಸ್ ಶೆಟ್ಟಿ ಮತ್ತು ಇತರರು ಕಲಾ ಸಂಭ್ರಮ ವೇದಿಕೆಯ ಮೇಲೇರಿ ವೇದಿಕೆಯ ಮೇಲಿದ್ದ ಗಣ್ಯರಿಗೆ ಹಾಗೂ ಇತರ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಲ್ಲದೆ ದಶಮಂಟಪದ ಬಹುಮಾನ ವಿಜೇತರಿಗೆ ಕೊಡಲು ಇಟ್ಟಿದ್ದ ಚಿನ್ನ ಮತ್ತು ಬೆಳ್ಳಿಯ ಬಹುಮಾನಗಳನ್ನು ವೇದಿಕೆಯಿಂದ ಎಸೆದು ನಷ್ಟಪಡಿಸಿದ್ದರು. ಅಲ್ಲದೆ ಅಲ್ಲಿ ಇದ್ದ ಶುವರ್ ಮೈಕ್, ಪೋಡಿಯಂ, ಎಲ್‌ಇಡಿ ಸ್ಕಿçÃನ್, ಪೇಪರ್ ಬ್ಲೋವರ್, ಧ್ವನಿವರ್ಧಕ ಲೈಟ್‌ಗಳಿಗೆ ಹಾನಿ ಮಾಡಿದ್ದರು.

ವೇದಿಕೆಯ ಕೆಳಗೆ ಇದ್ದವರು ಸುಮಾರು ೧೫೦ ಫೈಬರ್ ಕುರ್ಚಿಗಳನ್ನು ಒಡೆದು ಹಾಕಿ ಒಟ್ಟು ಸುಮಾರು ೨,೦೦,೦೦೦ ರೂ.ಗಳಷ್ಟು ನಷ್ಟಪಡಿಸಿದ್ದಾರೆ ಎಂದು ದೂರು ದಾಖಲಿಸಿಕೊಂಡ ಪೊಲೀಸರು ಪವನ್ ಕುಮಾರ್ ಕೆ.ಆರ್., ವಿನೋದ್ ಕಾರ್ಯಪ್ಪ, ಸುಹಾಸ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗೂ ಬಲೆ ಬೀಸಲಾಗಿದೆ ಎಂದು ಎಸ್‌ಪಿ ಕೆ. ರಾಮರಾಜನ್ ತಿಳಿಸಿದ್ದಾರೆ.