ಕೂಡಿಗೆ, ಅ. ೪: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರೂಪಾಕ್ಷಪುರದ ಶಿರಾಜಳ್ಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ರೂ. ೧೦ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ಭವನವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಸಿ.ಎಲ್. ವಿಶ್ವ, ಗ್ರಾಮದಲ್ಲಿ ಇಂತಹ ಒಂದು ಭವನದ ಅಗತ್ಯತೆ ಮನಗಂಡು ಆಡಳಿತ ಮಂಡಳಿ ನಿರ್ಣಯದಂತೆ ನೂತನ ಭವನ ನಿರ್ಮಿಸಲಾಗಿದೆ. ನಮ್ಮ ಅವಧಿಯಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕೇವಲ ರೂ. ೨೫ ಲಕ್ಷ ಇದ್ದ ಪಂಚಾಯಿತಿ ಆದಾಯ ಇಂದು ರೂ. ೧.೨೫ ಕೋಟಿಗೆ ವೃದ್ಧಿಸಿದೆ.
ಕೇವಲ ರಸ್ತೆ, ಚರಂಡಿ ಮಾತ್ರವಲ್ಲದೆ ಮಸೀದಿ, ಮಂದಿರಗಳಿಗೆ ಕೂಡ ಗ್ರಾ.ಪಂ. ಅನುದಾನ ಒದಗಿಸಿರುವುದು ವಿಶೇಷ. ಇದುವರೆಗೆ ಪ್ರಸಕ್ತ ನಮ್ಮ ಅವಧಿಯಲ್ಲಿ ಸುಮಾರು ರೂ. ೫ ಕೋಟಿಗೂ ಅಧಿಕ ಅನುದಾನವನ್ನು ಗ್ರಾಮಕ್ಕೆ ವಿನಿಯೋಗಿಸಲಾಗಿದೆ. ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೂಡ ಗ್ರಾ.ಪಂ. ಪಡೆದಿದೆ ಎಂದರು.
ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ಆರ್.ಕೆ. ಚಂದ್ರ ಮಾತನಾಡಿ, ನಮ್ಮ ಆಡಳಿತ ಮಂಡಳಿ ಬೇಧಬಾವ ತೋರದೆ ಒಮ್ಮತದ ನಿರ್ಣಯಗಳಿಂದ ಗ್ರಾಮದ ಎಲ್ಲಾ ಸಮುದಾಯ ವರ್ಗದವರಿಗೂ ಸರಕಾರದ ಸೌಲಭ್ಯಗಳನ್ನು ಒದಗಿಸಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಸೂಕ್ತ ಸ್ಥಳದ ಕೊರತೆ ಕಾಡುತ್ತಿತ್ತು. ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಭವನ ಅನುಕೂಲವಾಗಲಿದೆ ಎಂದರು.
ಸದಸ್ಯ ರಕ್ಷಿತ್ ಮಾವಜಿ ಮಾತನಾಡಿ, ತೀರಾ ಹದಗೆಟ್ಟಿದ್ದ ಈ ಪ್ರದೇಶವನ್ನು ಗುರುತಿಸಿ ಅನುದಾನ ಮೀಸಲಿರಿಸಿ ಇಂದು ಸುಂದರ ಭವನ ನಿರ್ಮಿಸಿರುವುದು ಸೇರಿದಂತೆ ನಮ್ಮ ಗ್ರಾ.ಪಂ. ವತಿಯಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಮಗೆ ಹೆಮ್ಮೆಯಿದೆ. ಇತರೆ ಗ್ರಾ.ಪಂ.ಗಳಿಗೆ ಭಿನ್ನ ಎಂಬAತೆ ನಮ್ಮ ಗ್ರಾ.ಪಂ. ಇಂದು ಆರ್ಥಿಕವಾಗಿ ಶಕ್ತವಾಗಿದೆ. ಮುಂಬರುವ ಜನಪ್ರತಿನಿಧಿಗಳು ಯಾವುದೇ ತೊಡಕಿಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯ ಅದಾಯ ಮೂಲಕ ಪಂಚಾಯಿತಿಗಿದೆ ಎಂದರು.
ಸದಸ್ಯೆ ಗಿರಿಜಮ್ಮ ಮಾತನಾಡಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮ, ಕಾರ್ಯದರ್ಶಿ ಶೇಷಗಿರಿ, ಸಂಜೀವಿನಿ ಒಕ್ಕೂಟದ ಸರಿತಾ ಸೇರಿದಂತೆ ಗ್ರಾಮಸ್ಥರು ಇದ್ದರು.