ಮಡಿಕೇರಿ, ಅ. ೫: ಜಿಲ್ಲಾ ಕೇಂದ್ರ ಮಡಿಕೇರಿಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆ ತನಕವೂ ಭಾರೀ ಜನಜಂಗುಳಿ ಕಂಡುಬAದಿತು.
ದಸರಾ ಹಿನ್ನೆಲೆ ನಗರಕ್ಕೆ ಆಗಮಿಸಿದ್ದ ಪ್ರವಾಸಿಗರು ಹಿಂತಿರುಗಲು ಮುಂದಾಗಿದ್ದು ಒಂದೆಡೆಯಾದರೆ, ಮಂಗಳೂರು, ಪುತ್ತೂರು, ಸುಳ್ಯ, ಮೈಸೂರು, ಬೆಂಗಳೂರು ಕಡೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕೊಡಗಿನ ವಿದ್ಯಾರ್ಥಿಗಳು ರಜೆ ಕಾರಣದಿಂದ ಜಿಲ್ಲೆಗೆ ಬಂದಿದ್ದು, ಇವರುಗಳೂ ವಾಪಸ್ಸು ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಭಾರೀ ಸಂಖ್ಯೆಯ ಪ್ರಯಾಣಿಕರು ಇದ್ದ ಹಿನ್ನೆಲೆ ಕೆ.ಎಸ್.ಆರ್.ಟಿ.ಸಿ.ಯಿಂದ ಬೆಂಗಳೂರು ಕಡೆಗೆ ಹಾಗೂ ಮಂಗಳೂರು ಕಡೆಗೆ ಎಂಟತ್ತು ಹೆಚ್ಚುವರಿ ಬಸ್ಗಳನ್ನು ವ್ಯವಸ್ಥೆ ಮಾಡಲಾಯಿತು. ಆದರೂ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಬಸ್ ನಿಲ್ದಾಣ ಜನಸಂದಣಿಯಿAದ ಕೂಡಿತ್ತು. ಎಲ್ಲಾ ಬಸ್ಗಳು ತುಂಬಿ ತುಳುಕುತ್ತಿದ್ದವು. ನಿಲ್ದಾಣಕ್ಕೆ ಬಸ್ ಆಗಮಿಸುತ್ತಿದ್ದಂತೆ ಬಸ್ ಏರಿ ಆಸನ ಗಿಟ್ಟಿಸಿಕೊಳ್ಳಲು ಜನರು ಮುಗಿಬೀಳುತ್ತಿದ್ದ ದೃಶ್ಯ ಕಂಡುಬAದಿತು. ಸಂಸ್ಥೆಯ ಸಿಬ್ಬಂದಿಗಳು ಪ್ರಯಾಣಿಕರ ಪ್ರಶ್ನೆಗಳಿಗೆ ಉತ್ತರಿಸಲು ಪರದಾಡುವಂತಾಗಿತ್ತು. ಕಳೆದ ಹಲವಷ್ಟು ಸಮಯಗಳಿಂದ ಮಡಿಕೇರಿ ಬಸ್ ನಿಲ್ದಾಣದಲ್ಲಿ ಇಂತಹ ಪರಿಸ್ಥಿತಿ ಕಂಡು ಬಂದಿರಲಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.