ವೀರಾಜಪೇಟೆ, ಅ. ೫: ಮನೆಬಿಟ್ಟು ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಬಾಳುಗೋಡು ಗ್ರಾಮದಲ್ಲಿ ಪತ್ತೆಯಾಗಿದೆ. ಆರ್ಜಿ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ನಿವಾಸಿ ಪಿ.ಪಿ. ಲೋಕೇಶ್ (ಕಾರ್ಯಪ್ಪ-೪೫) ಸಾವಿಗೀಡಾದ ವ್ಯಕ್ತಿ.

ಬಾಳುಗೋಡು ಗ್ರಾಮದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದ ಲೋಕೇಶ್ ಸೆ. ೨೯ ರಂದು ಕ್ಷÄಲ್ಲಕ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡಿ ಮನೆ ಬಿಟ್ಟು ತೆರಳಿದ್ದು, ಅನಂತರ ಹಿಂತಿರುಗಿ ಬಂದಿರುವುದಿಲ್ಲ. ಮನೆಯವರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದಾಗಲೂ ಪತ್ತೆಯಾಗಿರಲಿಲ್ಲ. ಬಳಿಕ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪತ್ನಿ ಲೀಲಾವತಿ ಅವರು ನೀಡಿದ ದೂರಿನ ಅನ್ವಯ ನಾಪತ್ತೆ ಪ್ರಕರಣ ದಾಖಲಾಗಿತ್ತು.

ತಾ. ೫ ರ ಸುಮಾರು ಬೆಳಿಗ್ಗೆ ೧೧ ಗಂಟೆಯ ವೇಳೆಗೆ ಮೂರಿರ ನಂಜಪ್ಪ ಎಂಬವರ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಲೋಕೇಶ್ ಮೃತದೇಹ ಪತ್ತೆಯಾಗಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.