ವೀರಾಜಪೇಟೆ, ಅ. ೫: ನವರಾತ್ರಿಗಳ ದಿನದಂದು ಶ್ರೀ ದುರ್ಗಾದೇವಿ ಯನ್ನು ಜನಪದ ಶೈಲಿಯ ಗರ್ಭಾ ನೃತ್ಯದ ಮೂಲಕ ಪೂಜಿಸಿ ವಿಜಯದಶಮಿ ಹಬ್ಬವನ್ನು ಸಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ರಾಜಸ್ತಾನ ವಿಷ್ಣು ಸಮಾಜ ವೀರಾಜಪೇಟೆ ವತಿಯಿಂದ ೪ನೇ ವರ್ಷದ ವಿಜಯದಶಮಿ ನವರಾತ್ರಿ ಹಬ್ಬದ ಆಚರಣೆ ನಗರದ ಕಾವೇರಿ ಕಲ್ಯಾಣ ಮಂಟಪದಲ್ಲಿ ನವ ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು. ಸಮಾಜ ಬಾಂಧವರು ವೃತ ಆಚರಿಸಿ ವಿಜಯದಶಮಿಯ ಕೊನೆ ದಿನ ಉಪವಾಸ ವ್ರತ ಆಚರಿಸಿದ ವ್ಯಕ್ತಿಗಳಿಗೆ ಗೌರವ ಸಲ್ಲಿಸುವುದರೊಂದಿಗೆ ಹಬ್ಬ ಆಚರಣೆ ಮಾಡಿದರು.

ರಾಜಸ್ತಾನ ಜಾನಪದ ಸಾಹಿತ್ಯ ಮತ್ತು ದುರ್ಗಾದೇವಿಯನ್ನು ಗರ್ಭಾ ನೃತ್ಯದ ಮೂಲಕ ಆರಾಧನೆ ಮಾಡಲಾಗುತ್ತದೆ ಎಂದು ಹಿರಿಯರಾದ ಚೇಲಾರಾಂ ಅವರು ಹೇಳಿದರು.

ಸಾಂಪ್ರದಾಯಿಕ ಧೀಮಂತ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವುದು ಸನಾತನ ಧರ್ಮಕ್ಕೆ ನೀಡಿರುವ ಕೊಡುಗೆಯಾಗಿದೆ. ನವರಾತ್ರಿ ಉತ್ಸವದಲ್ಲಿ ರಾತ್ರಿ ೮ರ ವೇಳೆಗೆ ದುರ್ಗಾದೇವಿಗೆ ಭಜನೆ, ದೇವಿಯ ಕೀರ್ತನೆ ಮತ್ತು ಮಹಾಪೂಜೆ, ನಂತರ ಗರ್ಭಾನೃತ್ಯ, ಬಳಿಕ ನವ ನವೀನ ಸಿಹಿ ಮತ್ತು ರಾಜಸ್ತಾನ ವಿಶೇಷ ಖಾದ್ಯಗಳ ಸಾಮೂಹಿಕ ಸಸ್ಯಹಾರಿ ಭೋಜನದೊಂದಿಗೆ ನವ ದಿನಗಳ ಆಚರಣೆ ನಡೆಯಿತು. ರಾಜಸ್ತಾನ ವಿಷ್ಣು ಸಮಾಜದ ಪ್ರಮುಖರಾದ ಚೇಲಾರಾಂ, ಮಧನ್, ನಪ್ರತ್ ಸಿಂಗ್, ಪಾರಸ್‌ಮಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.