ಪ್ರತೀ ವರ್ಷದಂತೆ ಈ ಬಾರಿಯೂ ವೀರಾಜಪೇಟೆಯಿಂದ ಪಕ್ಷಿಯೊಂದು ಹಾರಿ ಪರಿಸರ ಪ್ರೇಮಿಗಳ ಮನೆ ತಲುಪಿದೆ. ಪರಿಸರ, ವನ್ಯ ಜೀವನದ ಮಹತ್ವದ ಸಂದೇಶವನ್ನು ಸಾರುವ ಈ ಪಕ್ಷಿ ಜೀವಂತವಿರದೇ ಕಲೆಯಾಗಿದ್ದರೂ ಆ ಚಿತ್ರ ಸಾರುವ ಸಂದೇಶ ಮಾತ್ರ ಸದಾ ಜೀವಂತವಾಗಿದೆ.
ವೀರಾಜಪೇಟೆಯ ಹೆಸರಾಂತ ಪಕ್ಷಿ ತಜ್ಞ, ಡಾ. ಎಸ್.ವಿ. ನರಸಿಂಹನ್ ಕಳೆದ ೪೧ ವರ್ಷಗಳಿಂದ ಪಕ್ಷಿಗಳ ಚಿತ್ರಗಳನ್ನು ತಾವೇ ಕೈಯಾರೆ ಚಿತ್ರಿಸಿ ಅದನ್ನು ದೇಶ ಮಾತ್ರವಲ್ಲ, ವಿದೇಶದಲ್ಲಿಯೂ ಇರುವ ನೂರಾರು ವನ್ಯ ಪ್ರೇಮಿಗಳಿಗೆ ಅಂಚೆ ಮೂಲಕ ಕಳುಹಿಸುತ್ತಾ ಬಂದಿದ್ದಾರೆ.
ಈ ರೀತಿ ನರಸಿಂಹನ್ ರವಾನಿಸಿರುವ ಪಕ್ಷಿಗಳ ವೈವಿಧ್ಯಮಯ ಚಿತ್ರಗಳ ಸಂಖ್ಯೆ ೪೧ ವರ್ಷಗಳಲ್ಲಿ ೧೬.೬೪೦! ಈ ವರ್ಷ ಡಾ.ನರಸಿಂಹನ್ ರವಾನಿಸಿರುವ ಪಕ್ಷಿ ಸಂದೇಶದ ಚಿತ್ರಗಳ ಸಂಖ್ಯೆಯೇ ೧,೨೦೮. ಪ್ರತೀ ವರ್ಷ ಅಕ್ಟೋಬರ್ ಮೊದಲ ವಾರದಲ್ಲಿ ವನ್ಯಜೀವಿ ಸಪ್ತಾಹದ ಪ್ರಯುಕ್ತ ಡಾ.ನರಸಿಂಹನ್ ವನ್ಯಜೀವಿ ಸಂದೇಶ ಹೊತ್ತಿರುವ ಚಿತ್ರಗಳನ್ನು ಆಸಕ್ತರಿಗೆ ತಲುಪಿಸುತ್ತಾ ಬರುತ್ತಿದ್ದಾರೆ.
ಡಾ.ನರಸಿಂಹನ್ ಅವರ ಈ ಕಾರ್ಯಕ್ಕೆ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅತ್ಯಧಿಕ ಸಂಖ್ಯೆಯಲ್ಲಿ ವನ್ಯಜೀವಿಗಳ ಚಿತ್ರÀಗಳ ಕಾರ್ಡ್ ರಚಿಸುವ ಕಲಾವಿದ ಎಂಬ ಪ್ರತಿಷ್ಠಿತ ದಾಖಲೆ ಪತ್ರ ನೀಡಿದೆ. ವೀರಾಜಪೇಟೆಯಲ್ಲಿ ೪ ದಶಕಗಳ ಹಿಂದೆ ತರಂಗ ಎಂಬ ಸಾಂಸ್ಕೃತಿಕ ಸಂಘ ಇತ್ತು. ಈ ಸಮಾನಮನಸ್ಕರ ಸಂಘದ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಗೆ ಜಿಂಕೆಯ ಚಿತ್ರ ಬಿಡಿಸಿದ್ದೆ. ಇದು ಸಂಘದ ಸದಸ್ಯರಿಂದ ಅಪಾರ ಮೆಚ್ಚುಗೆಗೆ ಕಾರಣವಾಗಿತ್ತು. ಇದೇ ಉಮೇದಿನಲ್ಲಿ ವನ್ಯಜೀವಿಗಳ ಚಿತ್ರ ರೂಪಿಸತೊಡಗಿದೆ. ಆರಂಭಿಕ ವರ್ಷ ಜಿಂಕೆ ಚಿತ್ರವಿರುವ ೧೫೦ ಚಿತ್ರಗಳನ್ನು ರಚಿಸಿದ್ದೆ ಎಂದು ನರಸಿಂಹನ್ ಸ್ಮರಿಸಿಕೊಂಡರು.
ಪ್ರತೀ ವರ್ಷವೂ ಡಾ. ನರಸಿಂಹನ್ ಬೇರೆ ಬೇರೆ ಪಕ್ಷಿಗಳನ್ನು ಆಯಾ ವರ್ಷದ ಸಂದೇಶದ ಪಕ್ಷಿಗಳಾಗಿ ಆಯ್ಕೆ ಮಾಡಿಕೊಂಡು ಆ ಹಕ್ಕಿಗಳಿಗಿರುವ ಮಹತ್ವವನ್ನೂ ಸಂದೇಶ ಪತ್ರದಲ್ಲಿ ತಿಳಿಸುತ್ತಾರೆ. ಈ ವರ್ಷ ಡಾಕ್ಟರ್ ಆಯ್ಕೆ ಮಾಡಿಕೊಂಡ ಪಕ್ಷಿಯ ಹೆಸರು ಬಾಲದ ದೇವನಕ್ಕಿ.
ಭಾರತದಲ್ಲಲ್ಲದೇ ಉಷ್ಣವಲಯದ ಏಷ್ಯಾದಲ್ಲಿ ಕಾಣಸಿಗುವ, ನೋಡಲು ಆಪ್ಯಾಯಮಾನವಾದ ಜನಪಕ್ಷಿಯಾಗಿರುವ ಬಾಲದ ದೇವನಕ್ಕಿ, ತಾವರೆ, ಅಂತರಗAಗೆ, ಹಯಾಸಿಂತ್, ಮುಂತಾದ ತೇಲುವ ಸಸ್ಯವರ್ಗವನ್ನು ಹೊಂದಿದ ಸರೋವರಗಳು ಮತ್ತು ಕೊಳಗಳ ಮೇಲೆ ವಾಸಿಸುತ್ತವೆ. ಅವುಗಳಿಗೆ ಉದ್ದವಾದ ಕಾಲ್ಬೆರಳುಗಳು ಮತ್ತು ಉಗುರುಗಳಿದ್ದು, ತೇಲುವ ಎಲೆಗಳ ಮೇಲೆ ನಡೆಯಲು ಅವಕಾಶ ಮಾಡಿಕೊಡುತ್ತದೆ. ಪ್ರಜನನ ಕಾಲದಲ್ಲಿ ಗಂಡು ಹಕ್ಕಿಯ ಉದ್ದನೆಯ ಬಾಲ ಬಹಳ ಆಕರ್ಷಕವಾಗಿರುತ್ತದೆ. ಶ್ವೇತವರ್ಣ, ಕಪ್ಪುದೇಹ, ಕಪ್ಪುರೆಕ್ಕೆಯ ಮೇಲೆ ದೊಡ್ಡ ಬಿಳಿ ಪಟ್ಟಿ, ಉಜ್ವಲ ಹಳದಿ ಕುತ್ತಿಗೆ ಮೊದಲಾದ ಲಕ್ಷಣಗಳಿಂದ ಈ ದೇವನಕ್ಕಿಯನ್ನು ಸುಲಭವಾಗಿ ಗುರುತಿಸಲು ಸಾಧ್ಯ. ಇದು ನೀರಿನಲ್ಲಿರುವ ಜಲಸಸ್ಯಗಳನ್ನಲ್ಲದೇ ಅವುಗಳ ಬೀಜ, ಕೀಟ, ಮೃದ್ವಂಗಿ ಮುಂತಾದವುಗಳನ್ನು ತಿನ್ನುತ್ತದೆ. ಇದು ಅಪರೂಪಕ್ಕೆ ಹಾಡುತ್ತದೆ. ಹೀಗಾಗಿ ಇಂಥ ಅಪರೂಪದ ದೇವನಕ್ಕಿಯನ್ನೇ ಈ ವರ್ಷದ ಸಂದೇಶವಾಹಕ ಪಕ್ಷಿಯನ್ನಾಗಿ ಬಳಸಿಕೊಂಡಿದ್ದೇನೆAದು ಡಾ. ನರಸಿಂಹನ್ ತಿಳಿಸಿದರು.
ವಿಶ್ವದ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ವಿಶಿಷ್ಟ ಗುಣ ಇದೆ. ಅದರದ್ದೇ ಆದ ನಿಯಮಗಳಿದೆ. ಈ ನಿಯಮಗಳಿಗೆ ಅನುಗುಣವಾಗಿಯೇ ಸಕಲ ವಸ್ತುಗಳು ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಾ ಬರುತ್ತಿವೆ. ಒಂದು ಜೀವಿ ಮತ್ತೊಂದು ಜೀವಿಗೆ ಆಧಾರ, ಒಂದು ಜೀವಿ ಮತ್ತೊಂದು ಜೀವಿಯ ಆಹಾರ. ಇದು ಪ್ರಾಕೃತ್ತಿಕ ನಿಯಮ. ವೈರುದ್ಯ, ವೈರತ್ವಗಳ ನಡುವೇ ಎಲ್ಲಾ ಜೀವಿಗಳು ಈ ಪೃಥ್ವಿಯ ಮೇಲೆ ಒಗ್ಗಟ್ಟಿನಿಂದ ಜೀವಿಸುತ್ತಿವೆ. ಸಹಭಾಳ್ವೆ, ಸಾಮರಸ್ಯ, ಸಹಭಾಗಿತ್ಯ ಗುಣವೇ ಇದಕ್ಕೆಲ್ಲಾ ಕಾರಣ. ಇವೆಲ್ಲಾ ಪ್ರÀಕೃತ್ತಿಯು ನಿಶ್ಯಬ್ದವಾಗಿ ನಮಗೆ ಕಲಿಸಿದ ಅಪೂರ್ವ ಪಾಠ. ಇಂಥ ಕಾರ್ಯಕ್ಕೆ ಅಡ್ಡಗಾಲು ಹಾಕುವ, ಇಲ್ಲಿ ನಡೆಯುವ ಬಾಳಿನ ಆಟವನ್ನು ಏರುಪೇರು ಮಾಡುವ ವಿಕೃತ ಜೀವಿಯೇ ಮಾನವನಾಗಿದ್ದಾನೆ. ಇಂಥ ಮನಸ್ಥಿತಿ ಭವಿಷ್ಯದಲ್ಲಿ ತನ್ನ ಜೀವಕ್ಕೇ ಮಾರಕ ಎಂಬುದರ ಸಷ್ಟ ಅರಿವಿದ್ದರೂ, ಆಗಿಂದಾಗ್ಗೆ ಪ್ರÀಕೃತ್ತಿಯು ನೀಡುತ್ತಿರುವ ಎಚ್ಚರಿಕೆಯ ಗಂಟೆಯನ್ನೂ ನಿರ್ಲಕ್ಷಿಸುತ್ತಾ ಮುಂದೆ ಸಾಗುತ್ತಿರುವ ಮನುಕುಲಕ್ಕೆ ಎಚ್ಚರಿಕೆಯನ್ನು ಕಾಲದಿಂದ ಕಾಲಕ್ಕೆ ನೀಡಲೇಬೇಕಾಗಿದೆ.
ಈ ನಿಟ್ಟಿನಲ್ಲಿಯೇ ತಾನು ತನ್ನ ಕೈಲಾದ ಕಾರ್ಯವಾಗಿ ಪ್ರತೀ ವರ್ಷ ವನ್ಯಜೀವಿ ಸಂದೇಶವುಳ್ಳ ಪರಿಸರ ಕಾಳಜಿಯ ಅಂಚೆ ಕಾರ್ಡ್ಗಳನ್ನು ಆಸಕ್ತರಿಗೆ ರವಾನಿಸುತ್ತಿರುವುದಾಗಿ ಡಾ.ನರಸಿಂಹನ್ ಹೇಳುತ್ತಾರೆ. ವರ್ಷದಲ್ಲಿ ಸಮಯ ಸಿಕ್ಕಾಗಲೆಲ್ಲಾ ವೀರಾಜಪೇಟೆಯಲ್ಲಿನ ತನ್ನ ಮನೆಯ ಕೋಣೆಯಲ್ಲಿ ಕುಳಿತು ವನ್ಯಜೀವಿಗಳ ಚಿತ್ರಗಳನ್ನು ಬಿಡಿಸುತ್ತಾ ಅಕ್ಟೋಬರ್ ಬಂದೊಡನೆ ಆ ಚಿತ್ರಗಳನ್ನು ವ್ಯವಸ್ಥಿತವಾಗಿ ಅಂಚೆ ಮೂಲಕ ನರಸಿಂಹನ್ ಕಳುಹಿಸುತ್ತಾರೆ. ನರಸಿಂಹನ್ ರಚಿಸಿರುವ ಕೊಡಗಿನ ಪಕ್ಷಿ ಸಂಕುಲದ ಅಮೂಲ್ಯ ಕೃತಿಯಾಗಿರುವ ಕೊಡಗಿನ ಖಗರತ್ನಗಳು ಒಂದು ಅಪೂರ್ವ ದಾಖಲೆಯಾಗಿದೆ.
ಇದು ನರಸಿಂಹನ್ ಪಾಲಿಗೆ ಪ್ರತಿ ವರ್ಷದ ಕಾಯಕವಾಗಿದೆ. ವರ್ಷದಲ್ಲಿ ಮಳೆ ತಪ್ಪಬಹುದು, ಗಾಳಿಯಲ್ಲಿ ಏರಿಳಿತವಾಗಬಹುದು, ಆದರೆ ನರಸಿಂಹನ್ ಕಾಳಜಿಯ ಚಿತ್ರಗಳಲ್ಲಿ ಮಾತ್ರ ಲವವೇಶವೂ ಹೆಚ್ಚು ಕಮ್ಮಿಯಾಗುವುದಿಲ್ಲ. ಶಿಸ್ತುಬದ್ದ ಕೈಂಕರ್ಯಕ್ಕೆ ಮಾದರಿಯಾಗಿ ಡಾ.ನರಸಿಂಹನ್ ಕಂಡುಬರುತ್ತಾರೆ. ಡಾ. ನರಸಿಂಹನ್ ಸಂಪರ್ಕ ಸಂಖ್ಯೆ - ೯೪೮೦೭೩೦೮೮೪