ಕೂಡಿಗೆ, ಅ. ೫: ಸೈನಿಕ ಶಾಲೆ ಕೊಡಗು ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಅಸಾಧಾರಣ ಸಾಧನೆಯನ್ನು ದಾಖಲಿಸಿದೆ. ೨೦೨೫ರ ಸೆಪ್ಟೆಂಬರ್ ೧೪ ರಂದು ನಡೆದ ಪ್ರತಿಷ್ಠಿತ ಯುಪಿಎಸ್‌ಸಿ ಎನ್‌ಡಿಎ ಲಿಖಿತ ಪರೀಕ್ಷೆಯಲ್ಲಿ ೨೩ ಮಂದಿ ವಿದ್ಯಾರ್ಥಿಗಳು ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆ ಶಾಲೆಯ ಶೈಕ್ಷಣಿಕ ಹಾಗೂ ಸೈನಿಕ ಕ್ಷೇತ್ರದ ಶ್ರೇಷ್ಠತೆಯ ಪಯಣದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ.

ಈ ಯಶಸ್ಸಿನ ಶ್ರೇಯಸ್ಸು ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್‌ಜೀತ್ ಸಿಂಗ್ ಅವರ ದೂರದೃಷ್ಟಿಯ ಹಾಗೂ ಅವಿರತ ಪ್ರಯತ್ನದ ಸಾಕಾರವಾಗಿದೆ. ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಸಮಗ್ರ ಕಾರ್ಯಯೋಜನೆಯನ್ನು ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರಾದ ವಿಬಿನ್ ಕುಮಾರ್, ಎನ್‌ಡಿಎ ಮೇಲ್ವಿಚಾರಕರಾದ ಸಂಜೀವ್ ಕಿರಣ್ ಹಾಗೂ ಸಮರ್ಪಿತ ಶಿಕ್ಷಕ ಸುರೇಶ್, ರಮೇಶ್, ಶ್ರೀಲೇಖಾ ವಿ.ಎಸ್., ರಾಜಗೋಲ್ಕರ್, ಅಶೋಕನ್, ದಾದಾ ಕುಸನಾಲೆ ಹಾಗೂ ಅಶೋಕ್ ವೈ. ಕೆಂಗಾರೆ ಅವರ ಪರಿಶ್ರಮದಿಂದ ಯಶಸ್ವಿಯಾಗಿ ಜಾರಿಗೊಳಿಸಲಾಯಿತು.

ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಅವರು ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳ ಸಿದ್ಧತೆಯನ್ನು ಬಲಪಡಿಸಿದರು. ದೇಶದ ವಿವಿಧ ಭಾಗಗಳಿಂದ ಆಹ್ವಾನಿಸಲಾದ ಅತಿಥಿ ಬೋಧಕರ ಉಪನ್ಯಾಸಗಳು ಮತ್ತು ಸಂವೇದನಾತ್ಮಕ ಅಧಿವೇಶನ ಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಸಮಗ್ರ ತರಬೇತಿ ಹಾಗೂ ಅಗತ್ಯ ಪರಿಚಯವನ್ನು ಒದಗಿಸಿದರು.

ಈ ಅಸಾಮಾನ್ಯ ಫಲಿತಾಂಶವು ಕೇವಲ ವಿದ್ಯಾರ್ಥಿಗಳ ಶ್ರಮದ ಸಾಕ್ಷಿಯಾಗಿಯೇ ನಿಲ್ಲದೆ, ಶಾಲೆಯ ಶಕ್ತಿಶಾಲಿ ಮಾರ್ಗದರ್ಶನ ವ್ಯವಸ್ಥೆ ಮತ್ತು ಅದಕ್ಕಿರುವ “ವೀರತೆ, ದೃಢತೆ, ಪ್ರಮಾಣಿಕತೆ” ಎಂಬ ಮೂಲಮೂಲ್ಯದ ಪ್ರತಿಬಿಂಬವಾಗಿದೆ.

ಈ ಸಾಧನೆಯ ಮೂಲಕ ಸೈನಿಕ ಶಾಲೆ ಕೊಡಗು ಮತ್ತೊಮ್ಮೆ ಭವಿಷ್ಯದ ಭಾರತೀಯ ಸಶಸ್ತç ಪಡೆಗಳ ಅಧಿಕಾರಿ ನಾಯಕರ ಪೀಠವಾಗಿರುವುದನ್ನು ಸಾಬೀತುಪಡಿಸಿದೆ. ಈ ವಿದ್ಯಾರ್ಥಿಗಳು ಈ ವರ್ಷ ದೇಶದ ವಿವಿಧ ಭಾಗಗಳಲ್ಲಿ ನಡೆಯಲಿರುವ ಸೇವಾ ಆಯ್ಕೆ ಮಂಡಳಿಯ (ಎಸ್‌ಎಸ್‌ಬಿ) ಸಂದರ್ಶನಗಳಲ್ಲಿ ಹಾಜರಾಗಲಿದ್ದಾರೆ ಎಂದು ಪ್ರಾಂಶುಪಾಲ ಕರ್ನಲ್ ಅಮರ್‌ಜೀತ್ ಸಿಂಗ್ ಅವರು ತಿಳಿಸಿದ್ದಾರೆ.