ಮಡಿಕೇರಿ, ಅ. ೫: ಕೊಡವ ಹಾಕಿ ಅಕಾಡೆಮಿಯ ಚುನಾವಣೆ ಕಳೆದ ಭಾನುವಾರವಷ್ಟೆ ಪೂರ್ಣಗೊಂಡು ಇದೀಗ ನೂತನ ಆಡಳಿತ ಮಂಡಳಿ ಪಾಂಡAಡ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡಿದೆ.
ಅಕಾಡೆಮಿಯ ನೂತನ ಪದಾಧಿಕಾರಿಗಳ ಪ್ರಥಮ ಸಭೆ ನಿನ್ನೆ ವೀರಾಜಪೇಟೆಯ ಕೊಡವ ಹಾಕಿ ಅಕಾಡೆಮಿಯ ಕಚೇರಿಯಲ್ಲಿ ನಡೆಯಿತು.
ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಕಾಡೆಮಿಯ ಮುಂದಿನ ಕಾರ್ಯ ಯೋಜನೆಗಳ ಕುರಿತಾಗಿ ಚರ್ಚೆ ನಡೆಸಲಾಯಿತು. ಇದರೊಂದಿಗೆ ಕೆಲವು ರೂಪು-ರೇಷೆಗಳನ್ನು ಹಮ್ಮಿಕೊಳ್ಳಲಾಯಿತು.
ಕೊಡವ ಕೌಟುಂಬಿಕ ಹಾಕಿ ಉತ್ಸವದ ಕಳೆದ ೨೫ ವರ್ಷಗಳಲ್ಲಿ ಪ್ರಶಸ್ತಿಗೆ ಭಾಜನವಾಗಿರುವ ಹಾಗೂ ರನ್ನರ್ಸ್ ಪ್ರಶಸ್ತಿ ಗಳಿಸಿರುವ ಕುಟುಂಬ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿದೆ. ಈತನಕ ಒಟ್ಟು ೧೪ ಕುಟುಂಬಗಳು ವಿನ್ನರ್ಸ್ ಹಾಗೂ ರನ್ನರ್ಸ್ ಪ್ರಶಸ್ತಿ ಗಳಿಸಿದ್ದು ಈ ಪಂದ್ಯಾವಳಿ ೧೪ ಕುಟುಂಬಗಳ ನಡುವೆ ಜರುಗಲಿದೆ. ಮುಂದಿನ ಡಿಸೆಂಬರ್ ಅಂತ್ಯದೊಳಗೆ ಈ ಪಂದ್ಯಾವಳಿ ನಡೆಸಲು ಚಿಂತನೆ ನಡೆಸಲಾಗಿದ್ದು, ಜಾಗ ಸಮಯ ನಿಗದಿ ಮತ್ತಿತರ ವಿಚಾರಗಳನ್ನು ಅಂತಿಮಪಡಿಸಲು ನೂತನ ಕಾರ್ಯಾಧ್ಯಕ್ಷರಾಗಿರುವ ಒಲಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ ಅವರಿಗೆ ಈ ಅಧಿಕಾರವನ್ನು ನೀಡಲಾಯಿತು.
ಮಣ್ಣಿನ ಮೈದಾನದಲ್ಲಿ ಪಂದ್ಯ ನಡೆಸುವುದೋ ಅಥವಾ ಟರ್ಫ್ ಮೈದಾನವೋ ಎಂಬ ಚರ್ಚೆ ನಡೆದಿದ್ದು, ಇದನ್ನು ವಿವಿಧ ಕುಟುಂಬಗಳೊAದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಪೂಣಚ್ಚ ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಅಕಾಡೆಮಿಯ ಚಟುವಟಿಕೆಗಳನ್ನು ಉತ್ತಮವಾಗಿ ನಡೆಸಲು ಕೆಲವು ಆಂತರಿಕ ಸಮಿತಿ ರಚಿಸಲಾಯಿತು. ವೆಬ್‌ಸೈಟ್ ನಿರ್ವಹಣೆ, ಸೋಷಿಯಲ್ ಮೀಡಿಯಾ ನಿರ್ವಹಣೆಗೆ ನೂತನ ನಿರ್ದೇಶಕ ಮುದ್ದಂಡ ರಶಿನ್ ಸುಬ್ಬಯ್ಯ, ಅಕಾಡೆಮಿಯ ಸೂಕ್ತ ಜಾಗದ ವ್ಯವಸ್ಥೆಗೆ ಕಲಿಯಂಡ ಸಂಪನ್ ಅಯ್ಯಪ್ಪ ಅವರನ್ನು ಆಯ್ಕೆ ಮಾಡಲಾಯಿತು ಎಂದು ಬೋಪಣ್ಣ ಅವರು ತಿಳಿಸಿದ್ದಾರೆ.
ಚೇನಂಡ ಕಪ್‌ಗೆ ಸಹಕಾರ
ಮುಂದಿನ ವರ್ಷ ನಡೆಯಲಿರುವ ಚೇನಂಡ ಕಪ್ ಹಾಕಿ ಉತ್ಸವಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಂತೆ ಮುಂದಿನ ಶನಿವಾರ ಚೇನಂಡ ಕುಟುಂಬದವರೊAದಿಗೆ ಪೂರ್ವಭಾವಿ ಸಭೆ ನಡೆಸಲು ಹಾಗೂ ಉತ್ಸವ ನಡೆಸುವ ಅಧಿಕೃತ ಜವಾಬ್ದಾರಿಯ ಪತ್ರವನ್ನು ಈ ಸಂದರ್ಭ ಕುಟುಂಬಕ್ಕೆ ನೀಡಲು ನಿರ್ಧರಿಸಲಾಗಿದೆ.
ರೂ. ೧ ಲಕ್ಷ ಕೊಡುಗೆ ನೀಡಿದ ಕುಂಡ್ಯೋಳAಡ
೨೪ನೆಯ ವರ್ಷದ ಕೊಡವ ಕೌಟುಂಬಿಕ ಹಾಕಿನಮ್ಮೆ ಆಯೋಜಿಸಿ ಗಿನ್ನಿಸ್ ದಾಖಲೆಯ ಸಾಧನೆ ಮಾಡಿರುವ ಕುಂಡ್ಯೋಳAಡ ಕುಟುಂಬಸ್ಥರು ಕೊಡವ ಹಾಕಿ ಅಕಾಡೆಮಿಗೆ ರೂ. ೧ ಲಕ್ಷದ ಕೊಡುಗೆ ನೀಡಿದ್ದಾರೆ. ಇದನ್ನು ಕುಂಡ್ಯೋಳAಡ ಕುಟುಂಬದ ಪ್ರಮುಖರಾದ ದಿನೇಶ್ ಕಾರ್ಯಪ್ಪ, ವಿಶು, ಬಿಪಿನ್, ಕಾರ್ಯಪ್ಪ, ಮತ್ತಿತರರು ಅಕಾಡೆಮಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಇದಲ್ಲದೆ ಕಳೆದ ವರ್ಷ ಮುದ್ದಂಡ ಕಪ್ ಹಾಕಿ ನಡೆಸಿದ ನೆನಪಿನಲ್ಲಿ ಆ ಸಂದರ್ಭ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿರುವ ಸರ್ಟಿಫಿಕೇಟ್ ಅನ್ನು ಮುದ್ದಂಡ ರಶಿನ್ ಸುಬ್ಬಯ್ಯ ಅಕಾಡೆಮಿಗೆ ಹಸ್ತಾಂತರಿಸಿದರು.
ಸಭೆಯಲ್ಲಿ ಕಾರ್ಯದರ್ಶಿ ಕುಲ್ಲೇಟಿರ ಅರುಣ್ ಬೇಬ ಸೇರಿದಂತೆ ಮೂರು ತಾಲೂಕಿನ ಉಪಾಧ್ಯಕ್ಷರುಗಳು, ಇನ್ನಿತರ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.