ಸಿದ್ದಾಪುರ, ಅ. ೭ : ಜಾತಿಗಣತಿ ಸಮೀಕ್ಷೆಗೆ ತೆರಳಿದ ಶಿಕ್ಷಕನ ಮೇಲೆ ಕಾಡಾನೆ ದಾಳಿಗೆ ಮುಂದಾದ ಘಟನೆ ಮಾಲ್ದಾರೆ ಸಮೀಪದ ಅವರೆಗುಂದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಸೋಮವಾರದಂದು ಗೋಣಿಕೊಪ್ಪಲುವಿನ ಪ್ರೌಢಶಾಲೆ ಶಿಕ್ಷಕ ಶಿವರಾಂ ಎಂಬುವರು ತಮ್ಮ ಬೈಕಿನಲ್ಲಿ ಮಾಲ್ದಾರೆಯಿಂದ ಅವರೆಗುಂದ ಬಸವನಹಳ್ಳಿ ಮಾರ್ಗವಾಗಿ ದುಬಾರೆ ಹಾಡಿಗೆ ಸಮೀಕ್ಷೆಗೆ ತೆರಳುತ್ತಿದ್ದರು. ಕಾಡಾನೆಯೊಂದು ಏಕಾಏಕಿ ಶಿಕ್ಷಕ ಶಿವರಾಂ ಮೇಲೆ ದಾಳಿ ನಡೆಸಲು ಮುಂದಾಗಿದೆ. ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳುವಾಗ ಬೈಕಿನಿಂದ ಬಿದ್ದು ಕಾಲಿಗೆ ಗಂಭೀರ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ನಂತರ ಸ್ಥಳೀಯರ ನೆರವಿನಿಂದ ಶಿಕ್ಷಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಇರುವ ಹಿನ್ನೆಲೆಯಲ್ಲಿ ಸಮೀಕ್ಷೆಗೆ ತೆರಳುವ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್ ಹಾಗೂ ಕಂದಾಯ ಪರಿವೀಕ್ಷಕ ಅನಿಲ್‌ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶಿಕ್ಷಕರ ಯೋಗ ಕ್ಷೇಮ ವಿಚಾರಿಸಿದರು.