ಕಣಿವೆ, ಅ. ೮: ಹೆಗಲ ಮೇಲೊಂದು ಎಳೆಯ ಕೂಸು....ಮೊದಲೇ ಝಳ ಝಳ ಸುಡುವ ಬಿಸಿಲ ನಡುವೆಯೂ ಆ ಕೂಸಿನ ಮೇಲೊಂದು ಹೊದಿಕೆ...!

ಆ ಕೂಸಿನ ಮುಖ ಕೂಡ ಕಾಣದಂತೆ ಅದಕ್ಕೊಂದು ಟೋಪಿ. ಇದು ಕುಶಾಲನಗರದ ಮುಖ್ಯರಸ್ತೆಗಳಲ್ಲಿ ಕಂಡುಬAದ ಚಿತ್ರಣ. ಭಿಕ್ಷಾಟನೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದರೂ ಕೂಡ ಎಳೆಯ ಹಸುಳೆಗಳನ್ನು ತಂದು ಮಹಿಳೆಯರಲ್ಲಿ ಅನುಕಂಪ ಗಿಟ್ಟಿಸಿ ಭಿಕ್ಷೆ ಬೇಡುತ್ತಿರುವುದು ಅಪರಾಧವಾಗಿದೆ.

ಕನ್ನಡ ಭಾಷೆ ಅರಿಯದ ತೆಲುಗು ಮಾತನಾಡುವ ಮೂರ್ನಾಲ್ಕು ಮಹಿಳೆಯರು ಬೇರೆ ಬೇರೆ ಕಡೆ ತಿರುಗಿಕೊಂಡು ಸುತ್ತುತ್ತಾ ಭಿಕ್ಷೆ ಬೇಡುತ್ತಿರುವುದು ಅನುಮಾನಕ್ಕೆ ಆಸ್ಪದವಾಗಿದ್ದು ಕೂಡಲೇ ಪೊಲೀಸರು ಈ ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಕೆಲವು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಈ ಮಹಿಳೆಯರು ತಮ್ಮ ಎದೆಯ ಮೇಲೆ ಮಲಗಿಸಿಕೊಂಡು ಸಾಗುವ ಎಳೆಯ ಮಕ್ಕಳು ಸಾಮಾನ್ಯವಾಗಿ ಮಲಗಿದ ಸ್ಥಿತಿಯಲ್ಲೇ ಇರುವುದು ಕೂಡ ಕಂಡು ಬರುತ್ತಿದ್ದು, ಈ ಮಹಿಳೆಯರಿಗೂ ಮಕ್ಕಳಿಗೂ ಮುಖಭಾವದ ಕುರುಹುಗಳೇ ವ್ಯಕ್ತವಾಗುತ್ತಿಲ್ಲ. ಹಾಗಾಗಿ ಈ ಮಕ್ಕಳು ಯಾರು ? ಈ ಮಹಿಳೆಯರು ಎಲ್ಲಿಂದ ಬಂದಿದ್ದಾರೆ? ಇವರ ಹಿಂದಿನ ರೂವಾರಿಗಳಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕೆಂಬುದು ಕೂಡ ಆಗ್ರಹವಾಗಿದೆ. ಎಳೆಯ ಹಸುಳೆಗಳಾದ ಈ ಮಕ್ಕಳಿಗೆ ಈ ತಾಯಂದಿರು ಎಲ್ಲಿಯೂ ಹಾಲು ಉಣಿಸುವುದಾಗಲೀ, ಏನಾದರೂ ತಿನ್ನಿಸುವುದು ಅಥವಾ ಮುದ್ದಾಡುವುದು ಕೂಡ ಕಂಡು ಬಾರದ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ವಿಚಾರಣೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.