ಕಣಿವೆ, ಅ. ೯: ಕಳೆದ ಎರಡು ವರ್ಷಗಳಿಂದ ಬೆಲೆ ಏರಿಕೆ ಕಾಣದೇ ನಷ್ಟದ ಮೇಲೆ ನಷ್ಟಕ್ಕೆ ಸಿಲುಕಿದ್ದ ಶುಂಠಿ ಬೆಳೆಗಾರರಿಗೆ ಈ ಬಾರಿಯ ದೀಪಾವಳಿ ಹೊಸ ಬೆಳಕು ನೀಡಿದಂತಿದೆ.

ಅರ್ಥಾತ್ ಕೃಷಿಕರು ಈ ಬಾರಿ ಬೆಳೆದಿರುವ ಶುಂಠಿ ಫಸಲಿಗೆ ೬೦ ಕೆಜಿ ತೂಕದ ಚೀಲವೊಂದಕ್ಕೆ ಇದೀಗ ಬರೋಬ್ಬರಿ ೩೦೦೦ ರೂ. ಮಾರುಕಟ್ಟೆಯಲ್ಲಿ ದೊರಕುತ್ತಿದೆ. ಇದು ಈ ಬಾರಿಯ ಶುಂಠಿ ಬೆಳೆದ ಕೆಲವೇ ಕೆಲವು ಬಡ ಕೃಷಿಕರಲ್ಲಿ ಬಹಳಷ್ಟು ಖುಷಿ ತಂದಿದೆ.

ಕಳೆದ ವರ್ಷ ೨೦೨೪ ರಲ್ಲಿ ಇದೇ ಅವಧಿಯಲ್ಲಿ ಇದೇ ಶುಂಠಿಗೆ ಮಾರುಕಟ್ಟೆಯಲ್ಲಿ ೧೬೦೦ ರಿಂದ ೧೭೦೦ ರೂ ಇತ್ತು. ಹಾಗೆಯೇ ೨೦೨೩ ರಲ್ಲಿ ಇದೇ ಶುಂಠಿಗೆ ಗರಿಷ್ಠ ೪ ರಿಂದ ೫ ಸಾವಿರ ರೂಗಳವರೆಗೆ ಇತ್ತು. ಹಾಗಾಗಿ ೨೦೨೪ ರಲ್ಲಿ ಶುಂಠಿ ಬಿತ್ತನೆ ಮಾಡಿದ್ದ ರೈತರು ಬೆಲೆ ಇಳಿಕೆಯಿಂದಾಗಿ ಅಪಾರ ನಷ್ಟಕ್ಕೆ ಸಿಲುಕಿದ್ದರು. ಹೆಬ್ಬಾಲೆಯ ಸ್ನಾತಕೋತ್ತರ ಪದವೀಧರರೂ ಆಗಿರುವ ರೈತ ಸಂಘದ ಅಧ್ಯಕ್ಷ ಶರತ್ ಎಂಬವರು ೨೦೨೩ ರಲ್ಲಿ ಬೆಳೆದ ಶುಂಠಿ ಫಸಲಿಗೆ ಸಿಕ್ಕ ಅತ್ಯುತ್ತಮ ದರದಿಂದ ಸಂತುಷ್ಟರಾಗಿ ಮರು ವರ್ಷ ೨೦೨೪ ರಲ್ಲಿ ಬರೋಬ್ಬರಿ ೩೫ ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆ ಮಾಡಿದ್ದರು. ಆದರೆ ಬೆಲೆ ದಿಢೀರನೇ ಕುಸಿದ ಪರಿಣಾಮ ಒಂದೂವರೆ ಕೋಟಿ ರೂಗಳ ನಷ್ಟ ಅನುಭವಿಸಿದ್ದಾಗಿ ಯುವ ರೈತ ಶರತ್ ಶಕ್ತಿಯೊಂದಿಗೆ ಅಳಲು ತೋಡಿಕೊಂಡರು. ಇದೀಗ ೨೦೨೫ರ ಅಕ್ಟೋಬರ್‌ನಲ್ಲಿ ಶುಂಠಿ ಫಸಲಿಗೆ ೩೦೦೦ ರೂ. ಇರುವುದು ಮಾತ್ರ ಈ ಬಾರಿ ಬೆಳೆ ಉಳಿಸಿಕೊಂಡಿರುವ ಕೃಷಿಕರ ಖುಷಿಯನ್ನು ಇಮ್ಮಡಿಗೊಳಿಸಿದೆ.

ರೋಗಕ್ಕೆ ಬೆಳೆ ನಷ್ಟ :

ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿ ಬಡ ರೈತರು ಬೆಳೆದ ಶುಂಠಿ ಬೆಳೆಗೆ ಮಾರಕವಾದ ರೋಗ ಬಾಧೆ ಕಾಣಿಸಿಕೊಂಡಿದ್ದರಿAದ ರೋಗ ಹತೋಟಿಗೆ ತರಲಾಗದೇ ರಾಸಾಯನಿಕಗಳಿಗೆ ಹಣ ಖರ್ಚು ಮಾಡಿ ನಷ್ಟ ಮಾಡಿಕೊಂಡ ಕೃಷಿಕರು ಈ ಹಿಂದೆ ಇದ್ದ ಅತ್ಯಲ್ಪ ದರಕ್ಕೆ ಶುಂಠಿ ಮಾರಾಟ ಮಾಡಿ ಭತ್ತದ ನಾಟಿಗೆ ಕೆಲವರು ಮುಂದಾಗಿದ್ದರೆ, ಇನ್ನು ಕೆಲವರು ಜೋಳದ ಬೆಳೆ ಬೆಳೆದಿದ್ದರು.

ಆದರೆ ರೋಗವನ್ನು ಹತೋಟಿಗೆ ತಂದು ಬೆಳೆ ಯನ್ನು ಉಳಿಸಿಕೊಂಡಿದ್ದ ಬಂಡವಾಳ ಶಾಹಿ ಕೃಷಿಕ ರಿಗೆ ಈಗಿನ ಮಾರುಕಟ್ಟೆಯ ಏರಿದ ದರ ಒಂದಷ್ಟು ಸಂತಸ ತಂದಿದೆ ಎನ್ನಲಾಗುತ್ತಿದೆ. ೪ಏಳನೇ ಪುಟಕ್ಕೆ ಕಟಾವಿಗೆ ಮುಗಿ ಬಿದ್ದ ಕೃಷಿಕರು :

ಮಾರುಕಟ್ಟೆಯಲ್ಲಿ ಶುಂಠಿಗೆ ಒಳ್ಳೆಯ ದರ ಬರುತ್ತಿದ್ದಂತೆಯೇ ದೀಪಾವಳಿ ಹಬ್ಬದ ಬಳಿಕ ಬೆಲೆ ಇಳಿಕೆ ಕಾಣುವ ಭಯದಿಂದ ಈಗ ಶುಂಠಿ ಕಟಾವು ಮಾಡಲು ವ್ಯಾಪಾರಿಗಳ ಬಳಿ ಮುಗಿಬಿದ್ದಿದ್ದಾರೆ.

ಹಾಗಾಗಿ ಕುಶಾಲನಗರದ ಆಸುಪಾಸಿನಲ್ಲಿ ಇರುವ ಸುಮಾರು ೧೫ ಕ್ಕೂ ಹೆಚ್ಚಿನ ಶುಂಠಿ ವಾಷಿಂಗ್ ಮಿಷಿನ್ ಗಳ ಬಳಿ ಕಟಾವು ಗೊಂಡ ಶುಂಠಿ ತುಂಬಿಸಿ ತಂದ ಟ್ರಾಕ್ಟರ್ ಗಳು ಒಂದೆಡೆ ಕಂಡರೆ, ಮತ್ತೊಂದೆಡೆ ವಾಷಿಂಗ್ ನೊಂದಿಗೆ ತೂಕಕ್ಕೆ ಒಳಪಟ್ಟು ಪ್ಯಾಕಿಂಗ್ ಆಗುವ ಶುಂಠಿಯ ದಾಸ್ತಾನನ್ನು ಬೃಹತ್ ಲಾರಿಗಳಲ್ಲಿ ತುಂಬಿಸಿ ದೇಶದ ಹಲವು ರಾಜ್ಯಗಳಿಗೆ ವರ್ತಕರು ಒಯ್ಯುತ್ತಿದ್ದಾರೆ. ಅಲ್ಲಿಂದ ಖರೀದಿಸುವ ಈ ಶುಂಠಿ ಬಾಂಗ್ಲಾದೇಶ, ಅಫ್ಘಾನಿಸ್ಥಾನ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಒಟ್ಟಾರೆ, ಏರಿಕೆ ಕಂಡ ಶುಂಠಿ ಬೆಲೆ ಈ ಬಾರಿ ಕೃಷಿಕರಿಗೆ ದೀಪಾವಳಿಯ ಕೊಡುಗೆಯೊಂದಿಗೆ ಸಂತಸ ಹಾಗೂ ಸಂಭ್ರಮ ತಂದಿದೆ ಎನ್ನಬಹುದು.