ವೀರಾಜಪೇಟೆ, ಅ. ೧೦: ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಪುರಸಭೆ ಸದಸ್ಯ ಎಸ್. ಹೆಚ್. ಮತೀನ್ ಹೇಳಿದರು.
ವೀರಾಜಪೇಟೆಯ ಮೌಂಟೇನ್ ವ್ಯೂವ್ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿಗಳಿಗೆ ಐ.ಎ.ಎಸ್. ಮತ್ತು ಐ.ಪಿ.ಎಸ್. ತರಬೇತಿ ಕೇಂದ್ರ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ತರಬೇತಿ ತಯಾರಿ ನಡೆಸುವ ಕುರಿತು ಮತ್ತು ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಯನ್ನು ಹೊಂದಬೇಕೆAಬ ಉದ್ದೇಶದಿಂದ ಈ ತರಬೇತಿ ಆರಂಭಿಸಿರುವುದು ಶ್ಲಾಘನೀಯ ಎಂದರು.
ಸಾಹಿತಿ ರಜಿತ ಕಾರ್ಯಪ್ಪ ಮಾತನಾಡಿ, ಬಹುತೇಕ ಕೇಂದ್ರಗಳಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪದವಿ ಹಂತದಲ್ಲಿ ತರಬೇತಿ ನೀಡಿದರೆ. ಇಲ್ಲಿ ಪ್ರೌಢÀ ಶಾಲಾ ಹಂತÀದಲ್ಲಿ ತರಬೇತಿ ನೀಡುತ್ತಿರುವುದು ಗಮನಾರ್ಹ ಎಂದರು.
ಪುರಸಭೆಯ ಮಾಜಿ ಸದಸ್ಯೆ ತಸ್ಲಿಂ ಅಕ್ತರ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥಮಾಡದೆ ವಿದ್ಯೆಯೆಡೆಗೆ ಗಮನ ಹರಿಸಬೇಕು. ಸಹಕಾರ ಸಂಘದ ಅಧ್ಯಕ್ಷ ಅಲ್ತಾಫ್, ಉಪನ್ಯಾಸಕರಾದ ಶಾಫಿ ಅವರು ಮಾತನಾಡಿದರು.
ಈ ಸಂದರ್ಭ ತಂತ್ರಜ್ಞಾನದ ಬಗೆಗಿನ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ತಂತ್ರಜ್ಞಾನ ಯಂತ್ರದ ಉದ್ಘಾಟನೆ ಮಾಡಲಾಯಿತು. ರೋಬೋಟ್ ತಯಾರಿಕೆಯಲ್ಲಿ ವಿಜೇತ ಇಬ್ಬರೂ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಸಯ್ಯದ್ ನೆಕಾತ್ ಅಸ್ಮಾ ಅವರು ಮಾತನಾಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕಶ್ಮೀರಾ ಸಿಮ್ರಾನ್ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಹುದ್ದೆಯ ಕನಸು ನನಸು ಮಾಡುವ ಉದ್ದೇಶದಿಂದ ಈ ತರಬೇತಿ ನೀಡಲು ಯೋಜನೆ ಹಾಕಿದ್ದೇವೆ ಎಂದರು. ಈ ಸಂದರ್ಭ ಆಡಳಿತಾಧಿಕಾರಿ ಕರೀನಾ ಸರೋಶ್ ಸೇರಿದಂತೆ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.