ಮಡಿಕೇರಿ, ಅ. ೯: ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗುವುದು ನಿಶ್ಚಿತವಾಗಿದ್ದು, ಕೊಡಗಿನ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಬೇಡಿಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಸ್ಪಷ್ಟವಾಗಿ ನುಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ತಿಂಗಳಿನಲ್ಲಿ ಸಚಿವ ಸಂಪುಟ ಪುನರ್ ರಚನೆ ಆಗುತ್ತದೆ ಎಂದು ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿದ್ದಾರೆ. ಪ್ರಕ್ರಿಯೆ ಆರಂಭ ನಂತರ ಕೊಡಗಿಗೆ ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು. ರಾಜಕೀಯದಲ್ಲಿ ಹೊಸಮುಖಗಳು ಬರಬೇಕು. ಆಡಳಿತದ ಅನುಭವ ಪಡೆಯಬೇಕು. ಕೊಡಗಿಗೆ ಹಲವು ವರ್ಷಗಳಿಂದ ಸಂಪುಟದಲ್ಲಿ ಸ್ಥಾನ ದೊರೆತ್ತಿಲ್ಲ. ಅಪ್ಪಚ್ಚು ರಂಜನ್ ಅಲ್ಪಾವಧಿಗೆ ಸಚಿವರಾಗಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ನಿರ್ಲಕ್ಷö್ಯ ಇರಬಾರದು. ಇದನ್ನು ಮುಂದಿಟ್ಟು ಸ್ಥಾನ ಕೇಳಲಾಗುವುದು ಎಂದರು.