ಮಡಿಕೇರಿ, ಅ. ೯: ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಪ್ರತಿಭಟನೆಯನ್ನು ಖಂಡಿಸಿ ತಾ.೧೩ರಂದು ಬೆಳಿಗ್ಗೆ ೧೦.೩೦ಕ್ಕೆ ಪ್ರಗತಿಪರ ಚಿಂತಕರು, ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಅಂಬೇಡ್ಕರ್ ವಿಚಾರವಾದಿ ಸಿ.ಜೆ. ಮೋಹನ್ ಮೌರ್ಯ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಸ್ಟೀಸ್ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ ಸಂವಿಧಾನ ವಿರೋಧಿ ಕೃತ್ಯವಾಗಿದ್ದು, ದೇಶದ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ. ಈ ಕೃತ್ಯ ಎಸಗಿದ ವಕೀಲ ರಾಕೇಶ್ ಕಿಶೋರ್ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಅಲ್ಲದೆ ಈ ಕೃತ್ಯವನ್ನು ಸಮರ್ಥನೆ ಮಾಡಿಕೊಂಡ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರನ್ನು ಈ ಕೂಡಲೇ ರಾಜ್ಯ ಬಿಜೆಪಿ ಅಧ್ಯಕ್ಷರು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಅವರು ಒತ್ತಾಯಿಸಿದರು.

ಪ್ರಗತಿಪರ ಚಿಂತಕ ಮುನೀರ್ ಅಹ್ಮದ್ ಮಾತನಾಡಿ, ಜಸ್ಟೀಸ್ ಗವಾಯಿ ಅವರ ಹೇಳಿಕೆಯನ್ನು ವಿರೋಧಿಸಲು ಹಲವಾರು ಮಾರ್ಗಗಳಿದ್ದರೂ ಕೂಡ ಶೂ ಎಸೆಯುವ ಮೂಲಕ ನಮ್ಮ ಸಂವಿಧಾನಕ್ಕೆ ಅವಮಾನ ಮಾಡಲಾಗಿದೆ. ಇದು ಅಕ್ಷಮ್ಯ ಅಪರಾಧವಾಗಿದೆ ಎಂದರು.

ಮತ್ತೋರ್ವ ಪ್ರಗತಿಪರ ಚಿಂತಕ ನೆರವಂಡ ಉಮೇಶ್ ಮಾತನಾಡಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯಬೇಕು ಎಂಬ ದುರುದ್ದೇಶದಿಂದ ಈ ಕೃತ್ಯವೆಸಗಲಾಗಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.

ಪ್ರಗತಿಪರ ಚಿಂತಕ ಇಸಾಕ್ ಖಾನ್ ಮಾತನಾಡಿ, ಸಂವಿಧಾನಕ್ಕೆ ಅವಮಾನವಾಗುವಂತಹ ಇಂತಹ ಘಟನೆ ನಡೆದಿರುವುದು ಈ ದೇಶದ ದುರಂತ ಎಂದು ನುಡಿದರು.

ದಸಂಸ ಜಿಲ್ಲಾ ಸಂಚಾಲಕ ದಿವಾಕರ್ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ತಮ್ಮ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ; ಆದ್ದರಿಂದ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಸಂಘದ ಪ.ಜಾ. ಘಟಕದ ಗೌರವಾಧ್ಯಕ್ಷ ವಿನಯ್ ಉಪಸ್ಥಿತರಿದ್ದರು.