ಮಡಿಕೇರಿ, ಅ. ೧೦ : ಸ್ವಚ್ಛ ಕಾವೇರಿಗಾಗಿ ತಾ. ೨೪ ರಿಂದ ನ. ೧೬ರ ವರೆಗೆ ಕಾವೇರಿ ಜಾಗೃತಿ ರಥಯಾತ್ರೆ ನಡೆಯಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಹಾಗೂ ಕಾವೇರಿ ರಿವರ್ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಚAದ್ರಮೋಹನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ, ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದೊಂದಿಗೆ ಅ.೨೪ ರಿಂದ ನ. ೧೬ರ ವರೆಗೆ ೧೫ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ತಲಕಾವೇರಿಯಿಂದ ಪೂಂಪ್ಹಾರ್ ವರೆಗೆ ಯಾತ್ರೆ ಕೈಗೊಳ್ಳಲಾಗಿದ್ದು, ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ ಸಾಧುಸಂತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾ.. ೨೩ ರಂದು ಮಧ್ಯಾಹ್ನ ೨ ಗಂಟೆಗೆ ಸಾಧು ಸಂತರ ತಂಡ ಕಾವೇರಿ ಮಾತೆಯ ರಥದೊಂದಿಗೆ ಮೈಸೂರು ಮೂಲಕ ಕುಶಾಲನಗರಕ್ಕೆ ಆಗಮಿಸಲಿದ್ದಾರೆ. ತಾ. ೨೪ ರಂದು ಬೆಳಿಗ್ಗೆ ೮ ಗಂಟೆಗೆ ತಲಕಾವೇರಿ ಕ್ಷೇತ್ರದಲ್ಲಿ ಪೂಜಾ ಕಾರ್ಯಕ್ರಮ ಜರುಗಲಿದ್ದು, ೯ ಗಂಟೆಗೆ ವೀರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ದಿವ್ಯ ಸಾನಿಧ್ಯದಲ್ಲಿ ಕಾವೇರಿ ಜಾಗೃತಿ ಯಾತ್ರೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ ನೀಡಲಿದ್ದಾರೆ. ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಶಾಶ್ವತಿ ಧಾರ್ಮಿಕ ಕ್ರೀಯಾ ಕೇಂದ್ರದ ಮುಖ್ಯಸ್ಥರು ಹಾಗೂ ಕಾವೇರಿ ಜಾಗೃತಿ ತೀರ್ಥಯಾತ್ರೆ ಸಮಿತಿ ಮುಖ್ಯಸ್ಥ ಡಾ. ಭಾನುಪ್ರಕಾಶ್ ಶರ್ಮ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸ್ಥಾಪಕ ಅಧ್ಯಕ್ಷ ಗಣೇಶ ಸ್ವರೂಪಾನಂದ ಸ್ವಾಮೀಜಿ, ಅಖಿಲ ಭಾರತ ಸನ್ಯಾಸಿ ಸಂಘ ಕಾವೇರಿ ಜಾಗೃತಿ ರಥಯಾತ್ರೆಯ ಸ್ಥಾಪಕ ಸಂಚಾಲಕ ರಮಾನಂದ ಸ್ವಾಮೀಜಿ, ಅಖಿಲ ಭಾರತ ಸನ್ಯಾಸಿ ಸಂಘದ ಪ್ರಧಾನ ಕಾರ್ಯದರ್ಶಿ ವೇದಾಂತನAದ ಸ್ವಾಮೀಜಿ, ಖಜಾಂಚಿ ಶಿವರಾಮಾನಂದ ಸ್ವಾಮೀಜಿ, ಕಾವೇರಿ ಜಾಗೃತಿ ತೀರ್ಥಯಾತ್ರೆ ಸಂಯೋಜಕ ಬಾಲರಘುನಾಥನಂದ ಸ್ವಾಮೀಜಿ, ತಮಿಳುನಾಡು ಕಾವೇರಿ ಜಾಗೃತಿ ಯಾತ್ರೆ ಪ್ರಾಂತ ಸಂಚಾಲಕ ವಾಸು ರಾಮಚಂದ್ರನ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಾಂತ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪಾಲ್ಗೊಳ್ಳಲಿದ್ದಾರೆ ಎಂದರು.
೧೧ ಗಂಟೆಗೆ ಭಾಗಮಂಡಲ ಸಂಗಮದಲ್ಲಿ ಕಾವೇರಿ ನದಿಗೆ ಮಹಾ ಆರತಿ, ೧೨.೩೦ಕ್ಕೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಲಾಗುವುದು. ಸಂಜೆ ೪ ಗಂಟೆಗೆ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ೧೭೮ನೇ ವಿಶೇಷ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಮಠಾಧೀಶರಾದ ಸದಾಶಿವ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ, ರಮಾನಂದ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜಯಲಕ್ಷಿ÷್ಮ ಚಂದ್ರ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್, ರಾಮನಾಥಪುರ ಕಾವೇರಿ ನದಿ ಸ್ವಚ್ಛತಾ ಆಂದೋಲನ ಜಿಲ್ಲಾ ಸಂಚಾಲಕ ಎಂ.ಎನ್.ಕುಮಾರಸ್ವಾಮಿ, ನಮಾಮಿ ಕಾವೇರಿ ಸಂಚಾಲಕಿ ವನಿತಾ ಚಂದ್ರಮೋಹನ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ತಾ. ೨೫ ರಂದು ಬೆಳಿಗ್ಗೆ ೮ ಗಂಟೆಗೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ ಕಾವೇರಿ ನದಿಗೆ ಮಹಾ ಆರತಿ ಕಾರ್ಯಕ್ರಮ ನಡೆಯಲಿದ್ದು, ಕಣಿವೆ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಸುರೇಶ್ ಉಪಸ್ಥಿತರಿರಲಿದ್ದಾರೆ.
ಬೆಳಿಗ್ಗೆ ೧೦ ಗಂಟೆಗೆ ಕಣಿವೆಯಿಂದ ಶಿರಂಗಾಲ-ಕೊಣನೂರು ಮೂಲಕ ರಾಮನಾಥಪುರ ತೆರಳಿ ೧೨ ಗಂಟೆಗೆ ರಾಮನಾಥಪುರದಲ್ಲಿ ಕಾವೇರಿ ನದಿಗೆ ಮಹಾ ಆರತಿ ಸಲ್ಲಿಸಲಾಗುವುದೆಂದು ತಿಳಿಸಿದರು.
ಮಧ್ಯಾಹ್ನ ೧ ಗಂಟೆಗೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದ ಬಳಿ ಮಹಾ ಆರತಿ ನಡೆಯಲಿದೆ. ತಾ. ೨೬ ರಂದು ತಮಿಳುನಾಡಿನತ್ತ ಯಾತ್ರೆ ಸಾಗಲಿದೆ. ನ. ೧೬ ರಂದು ತಮಿಳುನಾಡಿನ ಪೂಂಪ್ಹಾರ್ ನಲ್ಲಿ ಕಾವೇರಿ ನದಿ ಮತ್ತು ಬಂಗಾಳಕೊಲ್ಲಿ ಸಮುದ್ರ ಸಂಗಮದಲ್ಲಿ ಆರತಿ ಜರುಗಲಿದ್ದು, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಚಂದ್ರಮೋಹನ್ ತಿಳಿಸಿದರು.
ಕಾವೇರಿ ರಕ್ಷಣೆಯ ಸಂಬAಧ ಸರ್ಕಾರ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಆದ್ದರಿಂದ ಕಾವೇರಿಯ ರಕ್ಷಣೆಗಾಗಿ ಸರ್ಕಾರಗಳು ನೂತನ ಯೋಜನೆಗಳನ್ನು ರೂಪಿಸಬೇಕು ಎಂದು ಚಂದ್ರಮೋಹನ್ ಮನವಿ ಮಾಡಿದರು. ಕಾವೇರಿ ತೀರ್ಥಯಾತ್ರಾ ಸಮಿತಿ ಸ್ಥಾಪಕ ಸಂಯೋಜಕ ಚಿ.ನಾ.ಸೋಮೇಶ್ ಮಾತನಾಡಿ, ಕಾವೇರಿ ಪವಿತ್ರ ನದಿ. ಆದರೆ, ಇಂದು ಹೆಚ್ಚಾಗಿ ತ್ಯಾಜ್ಯಗಳು ಸೇರ್ಪಡೆಗೊಂಡು ಮಲೀನಗೊಳ್ಳುತ್ತಿದ್ದಾಳೆ. ಅದನ್ನು ಕಾಪಾಡುವ ದೃಷ್ಠಿಯಿಂದ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಯಾತ್ರೆ ಸಂದರ್ಭ ಜನರಲ್ಲಿ ಅರಿವು ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ನದಿ ತೀರಗಳು ಸಂಸ್ಕೃತಿಗಳ ಉಗಮ ಸ್ಥಾನ. ನಮ್ಮ ದೇಶದಲ್ಲಿ ನದಿಗೆ ತಾಯಿ, ದೇವತೆ ಸ್ಥಾನ ನೀಡಿ ಪೂಜಿಸಲಾಗುತ್ತಿದೆ. ದಕ್ಷಿಣ ಭಾರತದ ಕೋಟ್ಯಂತರ ಜನ ಜಾನುವಾರುಗಳಿಗೆ ಜೀವಜಲವಾಗಿರುವ ಕಾವೇರಿ ಮೂಲದಲ್ಲಿ ಕಲುಷಿತಗೊಂಡು ಹರಿಯುತ್ತಿದೆ. ಆದ್ದರಿಂದ ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.
ಕಾವೇರಿ ಮಾತೆ ಜನ್ಮಭೂಮಿ ಕೊಡಗಿನಲ್ಲಿ ಮಲೀನವಾಗುತ್ತಿದ್ದು, ಜಿಲ್ಲಾಡಳಿತ ಕಾವೇರಿ ನದಿಯ ಪಾವಿತ್ರತ್ರೆಯನ್ನು ಮಾಲಿನ್ಯವನ್ನು ಕೆಡದಂತೆ ಕ್ರಮ ಕೈಗೊಳ್ಳಬೇಕೆಂದರು.
ಶುದ್ಧ ಕುಡಿಯುವ ನೀರಿನ ಸೇವನೆಯಿಂದ ಮನುಷ್ಯನೊಂದಿಗೆ ಇತರೆ ಜೀವಿಗಳು ಬದಕಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯಸ್ಥರು ಕಾವೇರಿ ನದಿಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಕಾವೇರಿ ಸಂರಕ್ಷಣೆಗೆ ಪ್ರತಿಯೊಬ್ಬರು ಪಣತೊಡಬೇಕು ಎಂದು ಹೇಳಿದರು.
ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ವಾಂಚೀರ ಮನು ನಂಜುAಡ ಮಾತನಾಡಿ ಕೊಡಗಿನಲ್ಲಿ ಕಾವೇರಿ ನದಿಯನ್ನು ದೇವತೆಯಾಗಿ ಪೂಜಿಸಲಾಗುತ್ತಿದೆ. ತೀರ್ಥರೂಪಿಣಿಯಾಗಿ ಹರಿಯುತ್ತಿರುವ ಕಾವೇರಿ ನದಿಯನ್ನು ನದಿಗೆ ತ್ಯಾಜ್ಯಗಳನ್ನು ಹಾಕಿ ನೀರನ್ನು ಮಾಲಿನ್ಯಗೊಳಿಸುವುದು ಸರಿಯಲ್ಲ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ಕುಶಾಲನಗರ ನಮಾಮಿ ಕಾವೇರಿ ಅಧ್ಯಕ್ಷರಾದ ವನಿತಾ ಚಂದ್ರಮೋಹನ್ ಮಾತನಾಡಿ, ಸಾರ್ವಜನಿಕರಿಗೆ ಕಾವೇರಿ ನದಿಯ ಮೇಲೆ ಭಕ್ತಿ ಭಾವ ಮೂಡಬೇಕು. ಈ ನಿಟ್ಟಿನಲ್ಲಿ ಸ್ವಚ್ಛ ಕಾವೇರಿಗಾಗಿ ಕುಶಾಲನಗರದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿ ಹುಣ್ಣಿಮೆಯಂದು ಕಾವೇರಿ ನದಿಗೆ ಮಹಾ ಆರತಿ ಮಾಡಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಆರ್ಯ ವೈಶ್ಯ ಮಂಡಳಿ ನಿರ್ದೇಶಕ ವಿ.ವೈಶಾಕ್ ಉಪಸ್ಥಿತರಿದ್ದರು.