ವೀರಾಜಪೇಟೆ, ಅ. ೯: ಮೈತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೆಪ್ಪುನಾಡು ಮೈತಾಡಿ ನಾಂಗಾಲಕೇರಿಯಲ್ಲಿ ಪ್ರಥಮ ವರ್ಷದ ಮುಕ್ತ ತೋಕ್‌ನಮ್ಮೆ ಪೈಪೋಟಿಯನ್ನು ನವೆಂಬರ್ ೨೩ ರಂದು ವೀರಾಜಪೇಟೆ ಮುಖ್ಯ ರಸ್ತೆಯಲ್ಲಿರುವ ಮಲ್ಲಮಟ್ಟಿ ಸೀತಾ ಎನ್‌ಕ್ಲೆöÊವ್‌ನಲ್ಲಿ ಪೂರ್ವಾಹ್ನ ೧೦ ಗಂಟೆಗೆ ನಡೆಸಲಾಗುವುದು ಎಂದು ನಾಂಗಾಲಕೇರಿ ತಕ್ಕ ಮುಖ್ಯಸ್ಥರಾದ ಬಾಳೆಕುಟ್ಟಿರ ಗಣು ಕಾವೇರಪ್ಪ ತಿಳಿಸಿದ್ದಾರೆ.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಪ್ಪನಾಡಿಗೆ ಅಡಗಿರುವ ನಾಂಗಾಲಕೇರಿಯಲ್ಲಿ ೭ ಕುಟುಂಬಗಳಿದ್ದು ೩೦೦ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಪುತ್ತರಿ ಕೈಲ್‌ಪೊಳ್ದ್ ನಮ್ಮೆಯನ್ನು ನಮ್ಮ ಕೇರಿಯಲ್ಲಿಯೆ ಒತ್ತೋರ್ಮೆಯಿಂದ ಆಚರಿಸಲಾಗುತ್ತಿದೆ. ಪ್ರಥಮ ಬಾರಿಗೆ ತೋಕ್‌ನಮ್ಮೆಯನ್ನು ನಡೆಸಲು ನಿರ್ಧರಿಸಿದ್ದು ಪಾಯಿಂಟ್ ೨೨ ರೈಫಲ್, ೧೨ ಬೋರ್ ಹಾಗೂ ಏರ್ ರೈಫಲ್ ಎಂಬ ಮೂರು ವಿಭಾಗಗಲ್ಲಿ ನಡೆಸಲಾಗುವುದು. ಈ ತೋಕ್‌ನಮ್ಮೆಯಲ್ಲಿ ಯಾವುದೇ ಜಾತಿ, ಮತ, ಬೇದ, ಪಂಕ್ತಿ ಇರುವುದಿಲ್ಲ. ಲಿಂಗ ಬೇಧ ಇಲ್ಲದೆ ಮುಕ್ತವಾಗಿ ಯಾರು ಬೇಕಾದರು ಭಾಗವಹಿಸಬಹುದು ಎಂದು ಹೇಳಿದರು. ನಾಂಗಾಲಕೇರಿ ಅಧ್ಯಕ್ಷ ಅಯ್ಯಮಂಡ ವೇಣು ಮಾತನಾಡಿ ತೋಕ್‌ನಮ್ಮೆಯಲ್ಲಿ ಭಾಗವಹಿಸುವ ಮೂರು ವಿಭಾಗಗಳ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಮುಂಡಚಾಡಿರ ಭರತ್ ೯೪೮೩೪೮೭೭೦೭ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸದಸ್ಯರುಗಳಾದ ಅಯ್ಯಮಂಡ ಪ್ರವೀಣ್ ಭೀಮಯ್ಯ, ಅಮ್ಮಂಡ ಸುಮನ್ ತಿಮ್ಮಯ್ಯ, ಬೇರೆರ ಮಿಥುನ್ ಬೆಳ್ಳಿಯಪ್ಪ ಉಪಸ್ಥಿತರಿದ್ದರು.