ಶ್ರೀಮಂಗಲ, ಅ. ೧೦: ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾಮಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೇಟಿ ನೀಡಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ಭಾಗದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸುವ ಕಾರ್ಯಕ್ರಮವಾಗಿ ರೂ.೯೦ ಲಕ್ಷ ವೆಚ್ಚದಲ್ಲಿ ನೂತನ ೧೧ ಕೆವಿ ಹೆಚ್ ಟಿ ವಿದ್ಯುತ್ ಮಾರ್ಗ ಕಾಮಗಾರಿಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ, ಹಲವು ನೂತನ ವಿದ್ಯುತ್ ಪರಿವರ್ತಕಗಳನ್ನು ಲೋಕಾರ್ಪಣೆ ಮಾಡಿದರು. ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಕ್ಷೇತ್ರಾದ್ಯಂತ ಉತ್ತಮ ವಿದ್ಯುತ್ ಪೂರೈಸಿ ಕೃಷಿಕರಿಗೆ ಹಾಗೂ ಗ್ರಾಹಕರಿಗೆ ನಿರಂತರವಾಗಿ ತಡೆರಹಿತ ವಿದ್ಯುತ್ ನೀಡಲು ಸರ್ಕಾರದ ವತಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ತಮ ಗುಣಮಟ್ಟದ ನೂತನ (ಮೊದಲ ಪುಟದಿಂದ) ವಿದ್ಯುತ್ ಮಾರ್ಗಗಳನ್ನು ಅಳವಡಿಸುವುದರೊಂದಿಗೆ, ನೂತನ ವಿದ್ಯುತ್ ಪರಿವರ್ತಕಗಳನ್ನು ಹಾಗೂ ಸಬ್ ಸ್ಟೇಷನ್ ಗಳನ್ನು ಕ್ಷೇತ್ರಾದ್ಯಂತ ಕೈಗೊಂಡಿರುವುದನ್ನು ತಿಳಿಸಿದರು. ಈ ಸಂದರ್ಭದಲ್ಲಿ ತಮ್ಮ ಅಹವಾಲುಗಳನ್ನು ಶಾಸಕರಲ್ಲಿ ಹೇಳಿಕೊಂಡ ಸಾರ್ವಜನಿಕರನ್ನು ಮಾತನಾಡಿಸಿ ಆದ್ಯತೆ ಮೇರೆಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾಲೂಕು ಬಗರ್ ಹುಕುಂ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ವಲಯ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಸ್ಥಳೀಯ ಪ್ರಮುಖರಾದ ಬುಟ್ಟಿಯಂಡ ತಂಬಿ ನಾಣಯ್ಯ, ಬೊಳ್ಳೇರ ಅಪ್ಪುಟ ಪೊನ್ನಪ್ಪ, ಬುಟ್ಟಿಯಂಡ ಗಪ್ಪಣ್ಣ, ಕಾಳಿಮಾಡ ರಶಿಕ್, ಚೊಟ್ಟೆಯಾಂಡಮಾಡ ವಿಶು ಮತ್ತು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪ್ರಮುಖರು ಇದ್ದರು.