ಸೋಮವಾರಪೇಟೆ, ಅ. ೧೦: ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದ ಕೃಷಿಕ ನಾಣಿಯಪ್ಪ ಅವರು ಬೆಳೆದಿದ್ದ ಕಾಫಿ ಹಾಗೂ ಏಲಕ್ಕಿ ತೋಟವನ್ನು ನಾಶ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಹಾಗೂ ಸಂತ್ರಸ್ತ ಕೃಷಿಕನಿಗೆ ಪರಿಹಾರ ಒದಗಿಸುವ ಸಂಬAಧ ಅರಣ್ಯ ಇಲಾಖೆ ನೀಡಿದ್ದ ಹಿಂದಿನ ಭರವಸೆ ಸುಳ್ಳಾಗಿದ್ದು, ಮುಂದಿನ ೩ ದಿನಗಳ ಒಳಗೆ ಈ ಬಗ್ಗೆ ಕ್ರಮವಾಗದಿದ್ದರೆ ಮತ್ತೊಮ್ಮೆ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸುವುದಾಗಿ ತಾಲೂಕು ರೈತ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಈ ಬಗೆಗಿನ ಮನವಿ ಪತ್ರವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಿರುವ ರೈತ ಹೋರಾಟ ಸಮಿತಿಯ ಪ್ರಮುಖರು, ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಳೆದ ತಾ. ೨೬.೦೯.೨೦೨೫ರಂದು ಅರಣ್ಯ ಭವನದ ಎದುರು ರೈತರು ಪ್ರತಿಭಟನೆ ನಡೆಸಿ, ಕಾಫಿ ಹಾಗೂ ಏಲಕ್ಕಿ ತೋಟವನ್ನು ನಾಶಪಡಿಸಿದ ಅರಣ್ಯ ಇಲಾಖಾ ಸಿಬ್ಬಂದಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಕೃಷಿಕ ನಾಣಿಯಪ್ಪ ಅವರಿಗೆ ನಷ್ಟ ಪರಿಹಾರ ಒದಗಿಸಿ ಕೊಡಬೇಕೆಂದು ಆಗ್ರಹಿಸಿದ್ದರು.
ರೈತರ ಬೇಡಿಕೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಕಾರಾತ್ಮಕಾಗಿ ಸ್ಪಂದಿಸಿ, ಮುಂದಿನ ೭ ದಿನಗಳ ಒಳಗೆ ಕ್ರಮ ವಹಿಸುವ ಭರವಸೆ ನೀಡಿದ್ದರು. ಇದಾಗಿ ೧೫ ದಿನಗಳ ಕಳೆದರೂ ಯಾವುದೇ ಪೂರಕ ಕ್ರಮಗಳು ಆಗಿಲ್ಲ. ಮುಂದಿನ ೩ ದಿನಗಳ ಒಳಗೆ ಕ್ರಮವಾಗದಿದ್ದರೆ ತಾ. ೧೭ರಂದು ಮತ್ತೊಮ್ಮೆ ಅರಣ್ಯ ಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ತಿಳಿಸಿದ್ದಾರೆ.
ಮನವಿ ಸಲ್ಲಿಕೆ ಸಂದರ್ಭ ರೈತ ಹೋರಾಟ ಸಮಿತಿಯ ಪದಾಧಿಕಾರಿಗಳಾದ ನತೀಶ್ ಮಂದಣ್ಣ, ಪ್ರಕಾಶ್ ಕಲ್ಕಂದೂರು, ಆದಿತ್ಯ ಹರಗ ಉಪಸ್ಥಿತರಿದ್ದರು.