ವೀರಾಜಪೇಟೆ, ಅ. ೧೦: ನಗರದ ಸೈಂಟ್ ಆ್ಯನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗ ಹಾಗೂ ಕನ್ನಡ ವಿದ್ಯಾರ್ಥಿ ಬಳಗದ ವತಿಯಿಂದ "ಪರಿಸರದಸ್ಮಿತೆ ಪೂಚಂತೇ" ಎಂಬ ಶೀರ್ಷಿಕೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಭಾಷಾ ಮುಖ್ಯಸ್ಥ ಡಾ. ಕೆ. ಬಸವರಾಜು ಅವರು ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಕೃಷಿ ಹಾಗೂ ಸಾಹಿತ್ಯದಲ್ಲಿ ಪರಿಸರ ಮತ್ತು ಜೀವ ಸಂಕುಲದ ಅನಾವರಣವಾಗಿರುವ ಬಗ್ಗೆ ನಿದರ್ಶನಗಳ ಮೂಲಕ ವಿವರಣೆ ನೀಡಿದರು.
"ಪೂರ್ಣಚಂದ್ರ ತೇಜಸ್ವಿ ಅವರ ಎಲ್ಲಾ ಬರಹಗಳು ಪ್ರಕೃತಿಯೊಂದಿಗೆ ಅನನ್ಯತೆ ಹೊಂದಿದೆ. ಪರಿಸರ ಜೀವ ಸಂಕುಲದ ಬಗ್ಗೆ ತೇಜಸ್ವಿಯವರು ಬರೆದಷ್ಟು ಬಹುಶಃ ಯಾವ ಬರಹಗಾರರೂ ಬರೆದಿರಲು ಸಾಧ್ಯತೆಯಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಿ.ಸಿ.ಎ ವಿದ್ಯಾರ್ಥಿಗಳಾದ ಮುಹಮ್ಮದ್ ಸಫ್ವಾನ್, ಆಶಿಕ್, ಮುಹಮ್ಮದ್ ಮುಸ್ತಾಕ್ ಹಾಗೂ ಶಿಬಿಲ್ ನ್ಯಾಸಗೊಳಿಸಿದ ಕನ್ನಡ ಭಾಷಾ ಮುಖ್ಯಸ್ಥ ಅರ್ಜುನ್ ಮೌರ್ಯ ಅವರ ಕುರಿತ ವೆಬ್ಸೈಟನ್ನು ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ಅನಾವರಣಗೊಳಿಸಿ ಮಾತನಾಡಿದರು.
ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಆಂತರಿಕ ಗುಣಮಟ್ಟ ಕೋಶದ ಸಂಯೋಜಕಿ ಬಿ.ಡಿ. ಹೇಮ, ಸಹ ಪ್ರಾಧ್ಯಾಪಕಿ ಪ್ರತಿಮ ರೈ ಹಾಜರಿದ್ದರು. ಕಾರ್ಯಕ್ರಮದ ಸಂಯೋಜಕ ಕನ್ನಡ ಭಾಷಾ ಮುಖ್ಯಸ್ಥ ಅರ್ಜುನ್ ಮೌರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿ ಕೃಷ್ಣ ಶಾಸ್ತಿç ಸ್ವಾಗತಿಸಿದರು. ಅಂಜಲಿ ನಿರೂಪಿಸಿದರು.