ಮಡಿಕೇರಿ, ಅ. ೧೧: ಪ್ರಸಕ್ತ ಸಾಲಿಗೆ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ತಾ. ೨೮ ರವರೆಗೆ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.

ಅಭ್ಯರ್ಥಿಗಳು ವರ್ಗ- ೧ ಮತ್ತು ಪ್ರವರ್ಗ ೨ಎ, ೩ಎ,೩ಬಿ ಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯದ ಮಿತಿ ಪ್ರವರ್ಗ-೧ ರ ಅಭ್ಯರ್ಥಿಗಳಿಗೆ ರೂ. ೩,೫೦,೦೦೦ ಹಾಗೂ ಪ್ರವರ್ಗ-೨ಎ. ೩ಎ,೩ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ. ೨,೫೦,೦೦೦ ಒಳಪಟ್ಟಿರಬೇಕು. ಪ್ರವರ್ಗ-೧ ರ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು ಪ್ರವರ್ಗ-೧ರ ಅಭ್ಯರ್ಥಿಗಳ ಕೊರತೆ ಇದ್ದಲ್ಲಿ ಸರ್ಕಾರದ ಆದೇಶದನ್ವಯ ನಿಯಮಾನುಸಾರ ಇತರೆ ವರ್ಗಗಳಲ್ಲಿ ಆಯ್ಕೆ ಮಾಡಲಾಗುವುದು. ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕಾನೂನು ಪದವಿ ಪಡೆದು ೨ ವರ್ಷದ ಒಳಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅರ್ಜಿದಾರರ ವಯಸ್ಸು ಪ್ರವರ್ಗ-೧ರ ಅಭ್ಯರ್ಥಿಗಳಿಗೆ ೪೦ ವರ್ಷದೊಳಗಿರಬೇಕು. ಪ್ರವರ್ಗ ೨ಎ, ೩ಎ, ೩ಬಿ ರ ಅಭ್ಯರ್ಥಿಗಳಿಗೆ ೩೮ ವರ್ಷದೊಳಗಿರಬೇಕು. ಅಭ್ಯರ್ಥಿಯು ತನ್ನ ಹೆಸರನ್ನು ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿರಬೇಕು.

ಕಾನೂನು ತರಬೇತಿಯು ೪ ವರ್ಷಗಳ ಅವಧಿಯಾಗಿದ್ದು ಮಾಸಿಕ ರೂ. ೪,೦೦೦ ದಂತೆ ಶಿಷ್ಯವೇತನ ನೀಡಲಾಗುವುದು. ಕಾನೂನು ತರಬೇತಿಯನ್ನು ಕೊಡಗು ಜಿಲ್ಲೆಯಿಂದ ಹಿಂದುಳಿದ ವರ್ಗಗಳ ೧೦ ಅಭ್ಯರ್ಥಿಗಳಿಗೆ ನೀಡಲು ಅವಕಾಶವಿರುತ್ತದೆ. ಆಯ್ಕೆಯಾದ ಅಭ್ಯರ್ಥಿಯು ವಕೀಲ ತರಬೇತಿಗೆ ಹೋಗುವ ಮುನ್ನ ತರಬೇತಿಯನ್ನು ಮಧ್ಯದಲ್ಲಿ ಬಿಟ್ಟಲ್ಲಿ ತರಬೇತಿ ವೆಚ್ಚಕ್ಕೆ ಶೇ. ೧೦ ರಂತೆ ಬಡ್ಡಿ ಸೇರಿಸಿ ಸರ್ಕಾರಕ್ಕೆ ಪಾವತಿ ಮಾಡುತ್ತೇನೆಂದು ರೂ. ೧೦೦ ರ ಛಾಪಾ ಕಾಗದದಲ್ಲಿ ಬರೆದುಕೊಡತಕ್ಕದ್ದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.