ಶನಿವಾರಸಂತೆ, ಅ. ೧೧: ದೊಡ್ಡ ಮಳ್ತೆ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ದೊಡ್ಡ ಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ. ಗೋಪಾಲಕೃಷ್ಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆ ಪ್ರಮೀಳಾ ಹೆಚ್.ಪಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಅಧ್ಯಕ್ಷ ಡಿ.ಎಂ. ಗೋಪಾಲ್ ಕೃಷ್ಣ ಮಾತನಾಡಿ, ಪ್ರತಿ ವರ್ಷ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಸದಸ್ಯೆ ಪ್ರಮೀಳಾ ಮಾತನಾಡಿ, ಗರ್ಭಿಣಿಯರು ಹೆಚ್ಚಾಗಿ ಪೌಷ್ಟಿಕ ಆಹಾರವನ್ನು ಸೇವಿಸಬೇಕು.

ಸ್ಥಳೀಯವಾಗಿ ಸಿಗುವ ಹಣ್ಣು ಹಂಪಲು, ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳು ಮುಂತಾದವುಗಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿರುವುದರಿಂದ ಇವುಗಳನ್ನು ಸೇವಿಸುವುದರಿಂದ ಗರ್ಭಿಣಿಯರಲ್ಲಿ ಪೌಷ್ಠಿಕಾಂಶ ವೃದ್ಧಿಸುತ್ತದೆ ಎಂದರು.

ವಳಗುಂದ ಆಶಾ ಕಾರ್ಯಕರ್ತೆ ಈಶ್ವರಿ ಮಾತನಾಡಿ, ಗರ್ಭಿಣಿಯರು ಮತ್ತು ಬಾಣಂತಿಯರು ಸರಿಯಾದ ಸಮಯಯಕ್ಕೆ ಚುಚ್ಚುಮದ್ದು ಮತ್ತು ಲಸಿಕೆಯನ್ನು ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಿದರು. ಆರೋಗ್ಯ ಸುರಕ್ಷಾಣಧಿಕಾರಿ ದಿವ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೊಡ್ಡಮಳ್ತೆ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಹಾಗೂ ಕಾಗಡಿಕಟ್ಟೆ ಅಂಗನವಾಡಿ ಕಾರ್ಯಕರ್ತೆ ಸವಿತಾ, ದೊಡ್ಡಮಳ್ತೆ ಆಶಾ ಕಾರ್ಯಕರ್ತೆ ಈಶ್ವರಿ, ಕಾಗಡಿಕಟ್ಟೆ ಆಶಾ ಕಾರ್ಯಕರ್ತೆ ಶೈಲಾ, ಅಂಗನವಾಡಿ ಸಹಾಯಕಿ ಕುಸುಮ, ಪಂಚಾಯಿತಿ ಕರ ವಸೂಲಿಗಾರ ವಿಶ್ವರೂಪಚಾರ್ಯ ಹಾಗೂ ಪಂಚಾಯಿತಿ ವ್ಯಾಪ್ತಿಯ ಗರ್ಭಿಣಿಯರು, ಬಾಣಂತಿಯರು ಹಾಗೂ ಪುಟಾಣಿ ಮಕ್ಕಳು, ಗ್ರಾಮಸ್ಥರು ಹಾಜರಿದ್ದರು.